ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳು ಇಲ್ಲದೆ ಕಾರ್ಮಿಕರು ಪರದಾಡುತ್ತಿದ್ದರೂ ಕೆಐಡಿ ಬಿಎ ಅಧಿಕಾರಿಗಳು ಕಣ್ಣುಚ್ಚಿ ಕುಳಿತು ಕೊಂಡಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ನಿರ್ಲಕ್ಷ್ಯ: ಪ್ರತಿದಿನ ಸಾವಿರಾರು ಕಾರ್ಮಿಕರು ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಕೆಲಸ ಮುಗಿಸಿ ಕತ್ತಲಿನಲ್ಲಿ ಮನೆಗೆ ಬರಬೇಕಾದ ಪರಿಸ್ಥಿತಿ ಒದಗಿಬಂದಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ಕೊಂಡಿದ್ದು ಹಾವು-ಚೇಳು ಗಳ ವಾಸಸ್ಥಳವಾಗಿದೆ. ರಾತ್ರಿ ವೇಳೆ ರಸ್ತೆಯಲ್ಲಿಯೇ ಹರಿದಾಡುತ್ತಿರುತ್ತವೆ.
ಎಷ್ಟೋ ಬಾರಿ ಕೆಲವರಿಗೆ ಕಚ್ಚಿರುವ ಉದಾಹರಣೆಗಳೂ ಇದೆ. ರಸ್ತೆ ಬದಿ ಗಿಡ ಸ್ವಚ್ಛ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ. ಪ್ರತಿ ವರ್ಷ ಸ್ವತ್ಛತೆಗೆಂದು ಸಾವಿರಾರು ರೂ. ಇಲಾಖೆಯಿಂದ ಡ್ರಾ ಮಾಡಿಕೊಳ್ಳುತ್ತಾರೆ. ಆದರೆ, ಸ್ವಚ್ಛತೆ ಮಾತ್ರ ಮರೀಚಿ ಕೆಯಾಗಿದೆ ಎಂದು ಆಪಾದಿಸಿದ್ದಾರೆ.
ಗಮನಹರಿಸಿ:ರಾತ್ರಿ ವೇಳೆ ಕಾರ್ಮಿಕರು ಮನೆಗೆ ಹೋಗುವವರೆಗೂ ಭದ್ರತಾ ಸಿಬ್ಬಂದಿ ಗಸ್ತು ತಿರುಗಬೇಕು. ಜತೆಗೆಭಾರೀ ವಾಹನ ಸರಕುಗಳನ್ನು ಸಾಗಾಣಿಕೆ ಮಾಡಲು ರಭಸದಿಂದ ಓಡಾಡುತ್ತವೆ. ಆದರೆ, ಬೀದಿದೀಪಗಳು ಇಲ್ಲದೆ ಯಾವ ವಾಹನಗಳು ಬರುತ್ತಿವೆ ಎಂಬುದು ಗೊತ್ತಾಗುವುದಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಇತ್ತ ಗಮನ ಹರಿಸಿ ಕಾರ್ಮಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿ ಪ್ರತಿ ದಿನ ಸಾವಿರಾರು ಮಂದಿ ಕೂಲಿಕಾರ್ಮಿಕರು ಅದರಲ್ಲೂ ಮಹಿಳೆಯರು ಹೆಚ್ಚಾಗಿ ಕೆಲಸಕ್ಕೆ ಹೋಗುತ್ತಾರೆ. ರಸ್ತೆಯಲ್ಲಿ ಬೀದಿದೀಪಗಳಿಲ್ಲ. ಗಿಡಗಂಟಿಗಳು ಬೆಳೆದುಕೊಂಡಿದ್ದು ಸ್ವಚ್ಛತೆ ಮಾಡಿಸಿ ದೀಪಗಳನ್ನು ಅಳವಡಿಸಿ ಅನುಕೂಲ ಮಾಡಿಕೊಡಬೇಕು.
● ಶಿವಲಿಂಗಮೂರ್ತಿ,
ತುಂಗಣಿ ನಿವಾಸಿ
ಪ್ರಕಾಶ ಹೂಕುಂದ