ಆಳಂದ: ಸಾಮಾಜಿಕ ಮನೋಬಲ ಅರ್ಥಮಾಡಿಕೊಂಡು ದುಡಿಯುವಂತ ಯುವಕ, ಯುವತಿಯರ ಪಡೆ ನಿರ್ಮಾಣವಾಗಬೇಕು ಎಂದು ಮಾಜಿ ಶಾಸಕ, ಎಂಆರ್‌ಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಭಾಷ ಗುತ್ತೇದಾರ ಹೇಳಿದರು.
ಪಟ್ಟಣದ ಎಂಎಆರ್‌ಜಿ ಶಿಕ್ಷಣ ಸಂಸ್ಥೆಯ ವಿಕೆಜಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಕಲಬುರಗಿ ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಕಲಬುರಗಿ ನೆಹರು ಯುವ ಕೇಂದ್ರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ಹೊನ್ನಳಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಮತ್ತು ಯುವ ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮುದಾಯ ದುಶ್ಚಟಗಳತ್ತ ಮುಖ ಮಾಡಿರುವುದು ತೀರಾ ಅಪಾಯಕಾರಿಯಾಗಿದೆ. ದುಶ್ಚಟಗಳಿಂದ ದೂರವಿದ್ದು, ಜನರ ಆರೋಗ್ಯ, ಶುದ್ಧ ಆಹಾರ ನೀರು, ಅರಿವು ಪರಿಸರದ ಮಹತ್ವದ ಅರಿವು ಮೂಡಿಸುವ ಮನೋಭಾವ ರೂಢಿಗತವಾಗಬೇಕು. ಸ್ವತ್ಛ ಭಾರತ ಯೋಜನೆ ರೂಪುರೇಷೆ ಜನರಿಗೆ ತಿಳಿಸಬೇಕು. ಶಿಕ್ಷಣದ ಜತೆಗೆ ಉನ್ನತ ಹುದ್ದೆಗೇರಲು ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದರು.
ಕಲಬುರಗಿ ವಿಶ್ವವಿದ್ಯಾಲಯ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ| ರಮೇಶ ಲಂಡನಕರ್ ಮಾತನಾಡಿ, ವಿದ್ಯಾರ್ಥಿಗಳು ಮೂಢನಂಬಿಕೆ ಕಂದಾಚಾರ ತೊಲಗಿಸಿ ಸಮಾಜ, ವಿಜ್ಞಾನ, ತಂತ್ರಜ್ಞಾನದ ಜತೆಗೆ ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಡಾ| ಮಾಲತಿ ಗಾಯಕವಾಡ ಮಾತನಾಡಿ, ಯುವಕ ಯುವತಿರ ಸಬಲೀಕರಣಕ್ಕಾಗಿ ನೆಹರು ಯುವ ಕೇಂದ್ರ ನಿರಂತರವಾಗಿ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು. ಸಂಸ್ಥೆ ಆಡಳಿತಾಧಿಕಾರಿ ರಾಘವೇಂದ್ರ ಚಿಂಚನಸೂರ, ವಿಕೆಜಿ ಮಹಾವಿದ್ಯಾಲಯ ಪ್ರಾಚಾರ್ಯ ಕೆ.ಎಸ್. ಸಾವಳಗಿ, ಗ್ರಾಮದ ಬಸವರಾಜ ಪೊಲೀಸ್‌ಪಾಟೀಲ ಮಾತನಾಡಿದರು.
ಪತ್ರಕರ್ತ ಮಹಾದೇವ ವಡಗಾಂವ, ಬಾಬುರಾವ ಹದರಿ, ಯುವ ಮುಖಂಡ ಶ್ರೀಕಾಂತ ಮಾನೆ, ಪ್ರಾಧ್ಯಾಪಕ ಖಂಡಪ್ಪ ವಗ್ಗೆ, ಜ್ಯೋತಿ ಖರ್ಲಗಿ, ನರೇಂದ್ರ ಹಿಪ್ಪರಗಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿರು ಪಾಲ್ಗೊಂಡಿದ್ದರು. ಶಿಬಿರದ ಅಧಿಕಾರಿ ರಾಜಕುಮಾರ ಬಡಿಗೇರ ಸ್ವಾಗತಿಸಿದರು. ಪ್ರಾಧ್ಯಾಪಕಿ ಅನುಜಾ ಬೆಲಸೂರೆ ಕಾರ್ಯಕ್ರಮ ನಿರೂಪಿಸಿದರು. ಗೌತಮ್ಮ ಬೀಳಗಿ ವಂದಿಸಿದರು.