Advertisement

ಆದರ್ಶ ಗಣಪ: ಉಡುಪಿ; ಹೀಗೊಂದು ಸಾಮರಸ್ಯದ “ಗಣಪತಿ”ಮನೆ

01:05 PM Aug 29, 2022 | Team Udayavani |

ಸಮಾಜದಲ್ಲಿ ಸೌಹಾರ್ದ ಮೂಡಬೇಕೆಂದು ಎಲ್ಲರೂ ಆಶಿಸುತ್ತಾರಲ್ಲ? ಇದು ಹೇಗೆ ಸಾಧ್ಯ? ಇದರ ಬೇರು ಇರುವುದಾದರೂ ಎಲ್ಲಿ? ಭಾಷಣದಲ್ಲಿಯೋ? ಕೃತಿಯಲ್ಲೋ?

Advertisement

ಉಡುಪಿ ಜಿಲ್ಲೆಯ ಕಾಪು ತಾ| ಮೂಡುಬೆಳ್ಳೆಯ ದಿನಸಿ ವ್ಯಾಪಾರಿ ಸುಬ್ಬಣ್ಣ ನಾಯಕ್‌ 69 ವರ್ಷಗಳ ಹಿಂದೆ ತನಗೆ ಮಕ್ಕಳಾದರೆ ಮಣ್ಣಿನ ಗಣಪತಿಯನ್ನಿಟ್ಟು ಪೂಜಿಸುತ್ತೇನೆಂದು ಹರಕೆ ಹೊತ್ತರು. ಅನಂತರ ಮಗನೊಬ್ಬ ಜನಿಸಿದ. ಗಣಪತಿ ಪ್ರಾರ್ಥನೆಯಿಂದ ಹುಟ್ಟಿದ್ದರಿಂದ ಮಗನಿಗೆ ಗಣಪತಿ ಎಂದು ನಾಮಕರಣ ಮಾಡಿದರು. ಅದುವರೆಗೆ ಗಣಪತಿ ಪೂಜೆ ನಡೆಯುತ್ತಿತ್ತಾದರೂ ಅಂದಿನಿಂದ ಪ್ರತಿವರ್ಷ ಮಣ್ಣಿನ ಗಣಪತಿ ವಿಗ್ರಹವಿರಿಸಿ ಪೂಜಿಸುವ ಕ್ರಮ ಆರಂಭಗೊಂಡಿತು. ಹಿಂದೆ ಮನೆಯಲ್ಲಿ ಹೆಚ್ಚಿನ ಜಾಗವಿದ್ದಿರಲಿಲ್ಲ. 20 ವರ್ಷಗಳಿಂದೀಚೆಗೆ ಮನೆಯಲ್ಲಿ ಹೆಚ್ಚಿನ ಸ್ಥಳಾವಕಾಶಗಳು ನಿರ್ಮಾಣಗೊಂಡು ಈ ಗಣಪತಿಗೆ ಸಾರ್ವಜನಿಕ ಗಣೇಶೋತ್ಸವದ ರೂಪವೂ ಸಿಕ್ಕಿತು.

ಬೆಳಗ್ಗೆ ವೈದಿಕರು ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ ನಡೆಸುತ್ತಾರೆ. ಅನಂತರ ಮೂಡುಗಣಪತಿ, ಅಷ್ಟೋತ್ತರ ಪೂಜೆಯ ಸೇವೆ ಸಲ್ಲುತ್ತದೆ. ಸುಮಾರು 3.30ರ ಒಳಗೆ ಪೂಜೆಗಳೆಲ್ಲ ಮುಗಿದಿರುತ್ತದೆ. ಮನೆಯ ಹೆಂಗಸರು, ಗಂಡಸರು (ಕುಟುಂಬಸ್ಥರು) ಸೇರಿ ಸುಮಾರು 50 ಮಂದಿ ಸುಮಾರು 50 ಬಗೆಯ ಖಾದ್ಯ ತಯಾರಿಸುತ್ತಾರೆ. ಇದಕ್ಕಾವ ವೃತ್ತಿಪರ ಬಾಣಸಿಗರನ್ನೂ ಕರೆಸುವುದಿಲ್ಲ. ಖಾದ್ಯಗಳ ಪಟ್ಟಿ ನೋಡಿದರೆ ಗಾಬರಿಯಾದೀತು. ಐದು ಬಗೆಯ ಪೋಡಿ, ಪತ್ರೊಡೆ, ಗುಂಡ (ಹಲಸಿನ ಎಲೆಯಿಂದ ಮಾಡುವುದು), ಮೂಡೆ (ಮುಂಡಕನ ಎಲೆಯಿಂದ ಮಾಡುವುದು), ಅಪ್ಪ, ಚಕ್ಕುಲಿ, ಎಳ್ಳುಂಡೆ, ಪತ್ತೋಳಿ (ಅರಸಿನ ಎಲೆಯಿಂದ ಮಾಡುವ ಸಿಹಿ), ಪಾಯಸ, ಕಡಲೆ-ಅರಳು- ಅವಲಕ್ಕಿ ಹೀಗೆ ಮೂರ್‍ನಾಲ್ಕು ಬಗೆಯ ಪಂಚಕಜ್ಜಾಯ, ಚಣೆಗಸಿ (ಕಡಲೆ ಗಸಿ), ಸಾಂಬಾರು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅಪರಾಹ್ನ 3.30ರಿಂದ ರಾತ್ರಿ 8 ಗಂಟೆವರೆಗೆ ಕನಿಷ್ಠ 500ರಿಂದ ಗರಿಷ್ಠ 800 ಜನರು ಈ ಮನೆಗೆ ಆಗಮಿಸಿ ಊಟ ಮಾಡುತ್ತಾರೆ. ಮೂಡುಬೆಳ್ಳೆ ಪರಿಸರದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ. ಇರುವ ಏಳೆಂಟು ಮುಸ್ಲಿಮರು, ಕನಿಷ್ಠವೆಂದರೂ 150 ಕ್ರೈಸ್ತರು, ಇನ್ನು ಹಿಂದೂಗಳು ಜಾತಿಮತ ಭೇದವಿಲ್ಲದೆ ಬಂದು ಪ್ರಸಾದ ಸ್ವೀಕರಿಸುತ್ತಾರೆ. ಕೆಲವರಂತೂ ವಿಶೇಷ ಖಾದ್ಯಗಳನ್ನು ಮನೆಗೆ ಕೊಂಡೊಯ್ಯುತ್ತಾರೆ. ಕೊರೊನಾ ಅವಧಿಯಲ್ಲಿಯೂ ನೂಕುನುಗ್ಗಲಾಗದಂತೆ ಬಂದು ಪ್ರಸಾದ ಸೇವಿಸಿದ್ದರು. ಇವರಿಗೆ ಪ್ರತ್ಯೇಕ ಆಮಂತ್ರಣವಿರುವುದಿಲ್ಲ, “ನೀವು ಇರುವವರೆಗೂ ಪ್ರತೀ ವರ್ಷ ಚೌತಿಗೆ ಬರಬೇಕು’ ಎಂದು ಸ್ಥಾಯೀ ಸ್ವರೂಪದ (ಸ್ಟಾಂಡಿಂಗ್‌ ಇನ್‌ಸ್ಟ್ರಕ್ಷನ್‌ ಇರುವಂತೆ) ಆಮಂತ್ರಣವಿರುತ್ತದೆ. ಗಣೇಶ ಚತುರ್ಥಿ ದಿನ ಈ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ.

ಸಮಾಜದಲ್ಲಿ ಸಾಮರಸ್ಯ ಬೆಳೆಯಬೇಕಾದರೆ ಮೊದಲು ಮನೆಯಲ್ಲಿ ನಡೆಯಬೇಕು. ಅನಂತರ ಅದು ಸಮಾಜದಲ್ಲಿ ಪಸರಿಸುತ್ತದೆ. ಉಪದೇಶ ಮಾಡುವ ಬದಲು ಉಪ ದೇಶವನ್ನೇ ಕಾರ್ಯರೂಪಕ್ಕೆ ತಂದರೆ ಮಾತಿಗೆ ಕೆಲಸವೇ ಇಲ್ಲದೆ ಕೃತಿಗಷ್ಟೇ ಮಾನ್ಯತೆ ಸಿಗುತ್ತದೆ. ಕೊನೆಗೂ ಆಗಬೇಕಾದದ್ದು ಯಾವುದು? ಕೃತಿಯೇ ಅಲ್ಲವೆ? ಒಂದೂರಿ ನಲ್ಲಿ ಸಾಮರಸ್ಯ ಮೂಡುವುದು ಹೇಗೆಂಬ ನೀತಿ ಈ “ಗಣಪತಿ’ ಮನೆಯಲ್ಲಿದೆ. 69 ವರ್ಷಗಳ ಹಿಂದೆ ಜನಿಸಿದ ಗಣಪತಿ ನಾಯಕ್‌ ಮತ್ತು ಸಹೋದರರ ನೇತೃತ್ವದಲ್ಲಿ ಈ ಸಾಮರಸ್ಯ ಮೇಳ ನಡೆಯುತ್ತಿದೆ.

Advertisement

– ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next