ಢಾಕಾ: ಭಾರತ ಮತ್ತು ಬಾಂಗ್ಲಾದೇಶ ವನಿತೆಯರ ನಡುವಿನ ಅಂತಿಮ ಏಕದಿನ ಪಂದ್ಯವು ಟೈ ನಲ್ಲಿ ಅಂತ್ಯವಾಗಿದೆ. ಸರಣಿಯ ನಿರ್ಣಾಯಕ ಪಂದ್ಯ ಟೈ ಆದ ಕಾರಣ ಸರಣಿಯೂ 1-1 ಅಂತರದಲ್ಲಿ ಸಮಬಲದಲ್ಲಿ ಕೊನೆಗೊಂಡಿದೆ. ಆದರೆ ಈ ಪಂದ್ಯದಲ್ಲಿ ಭಾರತೀಯ ನಾಯಕಿ ಹರ್ಮನ್ ಪ್ರೀತ್ ಕೌರ್ ಮಾತ್ರ ಅಂಪೈರ್ ಗಳ ವಿರುದ್ಧ ಕೆಂಡಕಾರಿದ್ದಾರೆ.
34 ನೇ ಓವರ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಹರ್ಮನ್, ಬಾಂಗ್ಲಾ ಬೌಲರ್ ನಹಿದಾ ಅಖ್ತರ್ ಎಸೆತವನ್ನು ಸ್ವೀಪ್ ಮಾಡಿದರು. ಆದರೆ ಚೆಂಡು ಪ್ಯಾಡ್ ಗೆ ಬಡಿದಾಗ ಬೌಲರ್ ಅಪೀಲ್ ಮಾಡಿದರು. ಅಂಪೈರ್ ಕೂಡಾ ತಡಮಾಡದೆ ಔಟ್ ಘೋಷಣೆ ಮಾಡಿದರು. ಇದರಿಂದ ಕೆರಳಿದ ಹರ್ಮನ್ ತನ್ನ ಬ್ಯಾಟ್ ನಿಂದ ವಿಕೆಟ್ ಗೆ ಬಡಿದು ಅಲ್ಲೇ ಪ್ರತಿಭಟಿಸಿದರು. ಅಲ್ಲದೆ ಅಂಪೈರ್ ಕಡೆ ನೋಡುತ್ತಾ ಬೈಯುತ್ತಾ ಪೆವಿಲಿಯನ್ ಕಡೆ ಸಾಗಿದರು.
ಪಂದ್ಯದ ಬಳಿಕ ಮಾತನಾಡಿದ ಹರ್ಮನ್ ಮತ್ತೆ ಅಂಪೈರ್ ಗಳ ವಿರುದ್ಧ ಕಿಡಿಕಾರಿದರು. “ಇಲ್ಲಿನ ಅಂಪೈರಿಂಗ್ ಗಳು ನಮಗೆ ತುಂಬಾ ಆಶ್ಚರ್ಯ ಉಂಟುಮಾಡಿದವು. ಮುಂದಿನ ಬಾರಿ ನಾವು ಬಾಂಗ್ಲಾದೇಶಕ್ಕೆ ಬಂದಾಗ ನಾವು ಈ ರೀತಿಯ ಅಂಪೈರಿಂಗ್ ಅನ್ನು ಎದುರಿಸಬೇಕೆಂದು ಖಚಿತಪಡಿಸಿಕೊಳ್ಳುತ್ತೇವೆ ಮತ್ತು ಅದಕ್ಕೆ ತಕ್ಕಂತೆ ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ಅಂಪೈರ್ ಗಳು ನೀಡಿದ ಕೆಲವು ನಿರ್ಧಾರಗಳ ಬಗ್ಗೆ ನಾವು ನಿಜವಾಗಿಯೂ ನಿರಾಶೆಗೊಂಡಿದ್ದೇವೆ” ಎಂದರು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ವನಿತೆಯರು ನಾಲ್ಕು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದರೆ, ಭಾರತದ ವನಿತೆಯರ ತಂಡವು 49.3 ಓವರ್ ಗಳಲ್ಲಿ 225 ರನ್ ಗೆ ಆಲೌಟಾಯಿತು. ಬಾಂಗ್ಲಾ ಪರ ಫರ್ಗಾನಾ ಹಖ್ ಶತಕ ಸಿಡಿಸಿ ಮಿಂಚಿದರೆ, ಭಾರತದ ಪರ ಹರ್ಲೀನ್ ಡಿಯೋಲ್ 77 ರನ್ ಮತ್ತು ಸ್ಮೃತ ಮಂಧನಾ 59 ರನ್ ಮಾಡಿದರು.