ಕುಷ್ಟಗಿ: ಮೊಹರಂ ಕತ್ತಲ ರಾತ್ರಿ ಅಲಾಯಿ ದೇವರ ಮುಂದೆ ಮಳೆ-ಬೆಳೆ ಕುರಿತು ಹೇಳಿಕೆ ಸಂದರ್ಭದಲ್ಲಿ ನೆರೆದ ಜನಸ್ತೋಮದ ಮದ್ಯೆ ವ್ಯಕ್ತಿಯೋರ್ವ ನವಿಲು ಗರಿಯಿಂದ ಏಕಾಏಕಿ ಹಲ್ಲೆ ನಡೆಸಿದ ವಿಲಕ್ಷಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಲಾಯಿ ದೇವರು ಅಶುರ್ಖಾನ ಬಳಿ ದೇವರನ್ನು ಹಿಡಿಯುವ ಹಸನಸಾಬ್ ಬೇವಿನಕಟ್ಟಿ ಭಕ್ತಾಧಿಗಳಿಗೆ ಫಲ ಆಶೀರ್ವಾದ ನೀಡುವ ಸಂದರ್ಭದಲ್ಲಿ ಅದೇ ಗ್ರಾಮದ ಮಂಜುನಾಥ ಹಾಬಲಕಟ್ಟಿ ಏಕಾಏಕಿ ನುಗ್ಗಿ ನವಿಲು ಗರಿಯಿಂದ ಗ್ರಾಮದ ವಿವಾಹಿತ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿ ಥಳಿಸಿದ್ದಲ್ಲದೇ ಸೀರೆ ಹಿಡಿದು ಎಳೆದಾಡಲು ಯತ್ನಿಸಿದ್ದಾನೆ. ಅದೇ ಸಂದರ್ಭದಲ್ಲಿ ಸ್ಥಳೀಯರು ಮದ್ಯೆ ಪ್ರವೇಶಿಸಿಸಿ ನಿಯಂತ್ರಿಸಿದ್ದರು.
ಸಾರ್ವಜನಿಕರ ಮಧ್ಯೆ ಅವಮಾನಿಸಿದ್ದು, ಜಾತಿ ನಿಂದನೆ ಮಾಡಿದ ಹಿನ್ನೆಲೆ ನೊಂದ ಮಹಿಳೆ ಮಂಜುನಾಥ ಹಾಬಲಕಟ್ಟಿ ಹಾಗೂ ಈತನಿಗೆ ಸಾಥ್ ನೀಡಿದ ಮಲ್ಲಿಕಾರ್ಜುನ ಬೂದಿಹಾಳ ಎಂಬವರ ವಿರುದ್ದ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಆರೋಪಿಗಳ ವಿರುದ್ಧ ಹನುಮಸಾಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 324, 353, 504 ಮತ್ತು ಎಸ್ಸಿ, ಎಸ್ಟಿ ಕಾಯ್ದೆ ಅಡಿ ದೂರು ದಾಖಲಾಗಿದೆ ಎಂದು ಪಿಎಸೈ ಅಶೋಕ ಬೇವೂರು ತಿಳಿಸಿದ್ದಾರೆ.