Advertisement

ಹರ್ಕೆಬಾಳು –ಬೆಚ್ಚಳ್ಳಿ ರಸ್ತೆಗೆ ಇನ್ನೂ ಕೂಡಿ ಬಂದಿಲ್ಲ ಡಾಮರು ಭಾಗ್ಯ

08:01 PM Dec 04, 2021 | Team Udayavani |

ಹೊಸಂಗಡಿ: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹರ್ಕೆಬಾಳಿನಿಂದ ಬೆಚ್ಚಳಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಯು ಕಲ್ಲು – ಮಣ್ಣಿನಿಂದ ಕೂಡಿದ್ದು, ದುರ್ಗಮವಾಗಿದೆ. ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನ ಒತ್ತಾಯಿಸುತ್ತಿದ್ದರೂ, 5-6 ಕಿ.ಮೀ. ದೂರದ ಈ ಮಣ್ಣಿನ ರಸ್ತೆಗೆ ಇನ್ನೂ ಅಭಿವೃದ್ಧಿ ಭಾಗ್ಯ ಮಾತ್ರ ಕೂಡಿ ಬಂದಿಲ್ಲ.

Advertisement

ಹರ್ಕೆಬಾಳಿನಿಂದ ಮುಖ್ಯವಾಗಿ ಬೆಚ್ಚಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇಲ್ಲಿನ ಬೆಚ್ಚಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಸಹ ನಡೆದುಕೊಂಡು ಹೋಗಲು ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಮಕ್ಕಳ ಸಹಿತ ಎಲ್ಲರೂ ಇದೇ ರಸ್ತೆಯಲ್ಲಿ ದಿನಾಲೂ ಪ್ರಯಾಸಪಟ್ಟು ನಡೆದುಕೊಂಡು ಹೋಗುತ್ತಿದ್ದರೂ, ಇದನ್ನು ನೋಡಿಕೊಂಡು ಸಹ ಸ್ಥಳೀಯಾಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಂತಿದೆ ಎನ್ನುವ ಆರೋಪ ಜನರದ್ದಾಗಿದೆ.

50ಕ್ಕೂ ಮಿಕ್ಕಿ ಮನೆ:

ಈ ಮಾರ್ಗದಲ್ಲಿ ಹರ್ಕೆಬಾಳಿನಿಂದ ಬೆಚ್ಚಳ್ಳಿಯವರೆಗೆ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು, ನಿತ್ಯ ಅನೇಕ ಮಂದಿ ಹೊಸಂಗಡಿ, ಸಿದ್ದಾಪುರ ಪೇಟೆಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಮುಖ್ಯವಾಗಿ ಶಾಲೆಗೆ ಹೋಗುವ ಮಕ್ಕಳು, ಬೆಳಗ್ಗೆ ಹಾಗೂ ಸಂಜೆ ವೇಳೆ ಡೇರಿಗೆ ಹಾಲು ಹಾಕಲು ಹೋಗುವ ಹೈನುಗಾರರ ಸಂಕಷ್ಟ ಮಾತ್ರ ಹೇಳತೀರದಾಗಿದೆ.

ಇದಲ್ಲದೆ ಪುರಾಣ ಪ್ರಸಿದ್ಧ ಹೊಳೆ ಶಂಕರನಾರಾಯಣ ದೇವಸ್ಥಾನವನ್ನು ಸಂಪರ್ಕಿಸಲು ಸಿದ್ದಾಪುರ ಮಾರ್ಗವಾಗಿ ಮುಖ್ಯ ರಸ್ತೆಯಿದ್ದರೂ, ಹರ್ಕೆಬಾಳು, ಬೆಚ್ಚಳ್ಳಿ ಮಾರ್ಗವಾಗಿ ಇದು ಹತ್ತಿರದ ದಾರಿಯಾಗಿದೆ. ಆದರೂ ಈ ಮಾರ್ಗದಲ್ಲಿ ವಾಹನ ಸಂಚಾರ ಮಾತ್ರ ದುಸ್ತರವಾಗಿರುವುದರಿಂದ ಕಷ್ಟಪಟ್ಟು ಸಂಚರಿಸುವಂತಾಗಿದೆ.

Advertisement

ಬಾಡಿಗೆಗೂ ಬರಲ್ಲ..

ಇಲ್ಲಿನ ಜನರಿಗೆ ಪಡಿತರ ಅಥವಾ ಅಗತ್ಯ ವಸ್ತುಗಳನ್ನು ಹೊಸಂಗಡಿಯಿಂದ ತೆಗೆದುಕೊಂಡು ಹೋಗಬೇಕಾಗಿದೆ. ಈ ದುರ್ಗಮ ಹಾದಿಯಲ್ಲಿ ರಿಕ್ಷಾ ಅಥವಾ ಇನ್ನಿತರ ವಾಹನಗಳನ್ನು ಬಾಡಿಗೆಗೆ ಕರೆದರೆ ಬರುವುದಿಲ್ಲ ಎನ್ನುವುದೇ ಹೆಚ್ಚಿನವರ ಚಾಳಿಯಾಗಿ ಬಿಟ್ಟಿದೆ. ಬಂದರೂ ದುಬಾರಿ ಬಾಡಿಗೆ ದರವನ್ನು ತೆರಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ.

ರಿಕ್ಷಾ ಬಾಡಿಗೆಗೆ ಕರೆದರೆ ಬರುವುದಿಲ್ಲ ಅನ್ನುತ್ತಾರೆ. ಬಂದರೂ ಹೆಚ್ಚು ಬಾಡಿಗೆ ಕೊಡಬೇಕು. ಯಾರಿಗಾದರೂ ಅನಾರೋಗ್ಯ ಉಂಟಾದರೆ ನಮ್ಮ ಪರಿಸ್ಥಿತಿ ಹೇಳತೀರದಾಗಿದೆ. ರಾಜೇಂದ್ರ ಬೆಚ್ಚಳ್ಳಿ, ಸ್ಥಳೀಯರು 

ಬೆಚ್ಚಳ್ಳಿ ಭಾಗದ ಜನರು ದುರ್ಗಮ ಹಾದಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಅರಿವಿದ್ದು, ಈ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 2 ಕೋ.ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾಗುವ ನಿರೀಕ್ಷೆಯಿದೆ. ಆದಷ್ಟು ಬೇಗ ಈ ರಸ್ತೆಯ ಡಾಮರು ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು.  ಶಾರದಾ ಗೊಲ್ಲ, ಅಧ್ಯಕ್ಷೆ, ಹೊಸಂಗಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next