ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಸತಿ ಯೋಜನೆಯ ಅಡಿಯಲ್ಲಿ ಜ. 18ರಂದು ಕಟೀಲು ಮಲ್ಲಿಗೆ ಅಂಗಡಿ ಸಮೀಪದ ಕೊಂಡೆ ಮೂಲೆ ಎಂಬಲ್ಲಿ ಸುಂದರಿ ಶೆಟ್ಟಿ ಎಂಬವರಿಗೆ ಒಕ್ಕೂಟದ ವತಿಯಿಂದ ನೂತನ ಮನೆ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ನೆರವೇರಿಸಿದರು.
ಶಿಲಾನ್ಯಾಸದ ಬಳಿಕ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಕಟೀಲು ತಾಯಿಯ ಆಶೀರ್ವಾದದಿಂದ ಮುಂಬಯಿಯ ಮಹಾದಾನಿಗಳ ಕೊಡುಗೆಯ ಮೂಲಕ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡುವಂಥ ಮಹತ್ಕಾರ್ಯವನ್ನು ನಾವೆಲ್ಲ ಸೇರಿ ಮಾಡುತ್ತಿದ್ದೇವೆ. ಸುಂದರಿ ಶೆಟ್ಟಿಯವರಿಗೆ ನೀಡಿ ನಿಮಗೆ ತಾಯಿ ಕಟೀಲೇಶ್ವರಿಯ ಅನುಗ್ರಹ ಸದಾ ಇರಲಿ. ಮನೆ ಆದಷ್ಟು ಶೀಘ್ರವಾಗಿ ಸಂಪೂರ್ಣಗೊಂಡು ನೆಮ್ಮದಿಯ ಜೀವನವನ್ನು ನಡೆಸಬೇಕು. ಅಸಹಾಯಕರಿಗೆ ಸಹಾಯ ಮಾಡುವ ಒಂದು ಸಂದರ್ಭವನ್ನು ನನಗೆ ಮತ್ತು ನನ್ನ ತಂಡಕ್ಕೆ ದೇವರು ಕರುಣಿಸಿದ್ದಾನೆ ಎಂದು ಹೇಳಲು ಬಹಳ ಸಂತೋಷವಾಗುತ್ತದೆ ಎಂದು ನುಡಿದು ಶುಭ ಹಾರೈಸಿದರು.
ಇದನ್ನೂ ಓದಿ:ಮೂಲ ಸೌಕರ್ಯ ಯೋಜನೆಗಳಿಗೆ ಭೂಮಿಪೂಜೆ
ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಮಾತನಾಡಿ, ಒಕ್ಕೂಟದಿಂದ ನಾವು ಮಾಡುವ ಕೆಲಸವು ಸಮಾಜಕ್ಕೆ ಮಾದರಿಯಾಗಿದೆ. ಕೆಲಸಗಳನ್ನು ಶ್ರೀದೇವಿಯ ದಯೆಯಿಂದ ನಾವು ಮಾಡುತ್ತಿದ್ದೇವೆ. ಸುಂದರಿ ಶೆಟ್ಟಿಯವರು ಅರ್ಹ ಫಲಾನುಭವಿಯಾಗಿದ್ದಾರೆ. ಕಟೀಲು ಯಕ್ಷಗಾನದಲ್ಲಿ ಅವರ ಪುತ್ರ ಕೆಲಸಮಾಡುತ್ತಿದ್ದು, ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಮನೆ ಇಲ್ಲದೆ ಇರುವುದನ್ನು ಕಂಡು ನಮ್ಮ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಗುರುತಿಸಿ ಇವರಿಗೆ ಮನೆ ಕಟ್ಟಿಸಿ ಕೊಡುವ ಮಹತ್ಕಾರ್ಯವನ್ನು ಮಾಡುತ್ತಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಲ್ಕಿ ಜೀವನ್ ಶೆಟ್ಟಿ, ಬಾಲಕೃಷ್ಣ ರೈ ಅಭಿಲಾಶ್ ಶೆಟ್ಟಿ, ಸುರೇಶ್ ಶೆಟ್ಟಿ ಸೂರಿಂಜೆ, ಸತೀಶ್ ಶೆಟ್ಟಿ ಎಕ್ಕಾರು, ಅಮೂಲ್ಯ ಶೆಟ್ಟಿ ಕಟೀಲು, ಪ್ರೇಮಾ ಶೆಟ್ಟಿ ಕಟೀಲು ಉಪಸ್ಥಿತರಿದ್ದರು.