ಬೆಳ್ತಂಗಡಿ: ಶಾಸಕರಾಗಿ ಕಳೆದ 5 ವರ್ಷಗಳ ಅವಧಿಯಲ್ಲಿ ಬಡವರ ಕಣ್ಣೊರೆಸುವ ಜತೆ ಎಲ್ಲ ಧರ್ಮದವರ ಪ್ರೀತಿ ವಿಶ್ವಾಸವನ್ನು ಹರೀಶ್ ಪೂಂಜ ಗಳಿಸಿದ್ದಾರೆ. 3500 ಕೋಟಿ ರೂ. ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದರಿಂದ ಈ ಬಾರಿ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಶಾಲಿಯಾಗುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ, ಶಾಸಕ ಹರೀಶ್ ಪೂಂಜ ಪರವಾಗಿ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಮೇ 8ರಂದು ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಬೆಳ್ತಂಗಡಿಯಲ್ಲಿ ಹಿಂದಿನ 60 ವರ್ಷಗಳಲ್ಲಿ ಆಗದ ಕೆಲಸ ಕಳೆದ 5 ವರ್ಷಗಳಲ್ಲಾಗಿದೆ. ಸುಂದರ ಪ್ರವಾಸಿ ಬಂಗಲೆ ನಿರ್ಮಾಣವಾಗಿದೆ. ಮುಂದೆ ಮಾದರಿ ಬಸ್ ನಿಲ್ದಾಣ ಹಾಗೂ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ ಎಂದರು.
ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆೆ. ರಾಜ್ಯದಲ್ಲಿ 120 ಕ್ಕಿಂತ ಅಧಿಕ ಸ್ಥಾನಗಳು ಬಿಜೆಪಿಗೆ ಬರಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗಾಗಿ 10 ಸಾವಿರ ಮನೆ ನಿರ್ಮಾಣ ಮಾಡಲಿದ್ದೇವೆ. ಗ್ಯಾರಂಟಿ ಕಾರ್ಡು ಹಂಚುತ್ತಿರುವ ಕಾಂಗ್ರೆಸ್ ಪಕ್ಷಕ್ಕೇ ಗ್ಯಾರಂಟಿ ಇಲ್ಲ ಎಂದರು.
ಹರೀಶ್ ಪೂಂಜ ಮಾತನಾಡಿ, ತಾಲೂಕಿಗೆ ನೆರೆ, ಕೊರೊನಾ ಬಾಧಿಸಿದ ಸಂದರ್ಭದಲ್ಲಿ ಜಾತಿ-ಧರ್ಮ ನೋಡದೆ ಜನಸೇವಕನಾಗಿ ಕೆಲಸ ಮಾಡಿದ್ದೇನೆ. ತಾಲೂಕು, ಜಿಲ್ಲೆಯ ಹಿಂದೂ ಬಾಂಧವರು ಕಷ್ಟಕ್ಕೆ ಒಳಗಾದಾಗ ರಾತ್ರಿ ಹಗಲು ಎನ್ನದೆ ಸಾಮರಸ್ಯದಿಂದ ಐದು ವರ್ಷ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ, 718 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ, ಉಜಿರೆ ಬೆಳಾಲು ರಸ್ತೆಯ ನಿನ್ನಿಕಲ್ಲು ಬಳಿ 116 ಎಕ್ರೆ ಭೂ ಪ್ರದೇಶವನ್ನು ಕೈಗಾರಿಕಾ ವಲಯವಾಗಿ ಮಾಡಿ ತಾಲೂಕಿನ 2500 ಜನರಿಗೆ ಉದ್ಯೋಗ ಒದಗಿಸುತ್ತೇನೆ ಎಂದರು.
ಜಿಲ್ಲಾ ಉಪಾಧ್ಯಕ್ಷ, ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ ಮಾತನಾಡಿ, ನರೇಂದ್ರ ಮೋದಿ ಬಂದ ಮೇಲೆ ಜಾತಿ, ಕೋಮು, ಕುಟುಂಬ ರಾಜಕಾರಣ ಅಂತ್ಯವಾಗಿದೆ. ಹಾಗಾಗಿ ರಾಷ್ಟ್ರೀಯ ಚಿಂತನೆಗಾಗಿ ಬಿಜೆಪಿಗೆ ಮತ ಚಲಾಯಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ಮಾತನಾಡಿ, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜರ ಪರ ಪ್ರಚಾರ ಮಾಡಿ ಮತ ಕೇಳಬೇಕಾದ ಅಗತ್ಯವಿಲ್ಲ. ಅವರ ಕೆಲಸ ಕಾರ್ಯಗಳೇ ವಿಶ್ವಾಸದಿಂದ ಮತ ಕೇಳುವಷ್ಟು ಬಿಜೆಪಿ ಬೆಳೆದಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಮಂಡಲ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪಕ್ಷದ ಮುಖಂಡರಾದ ಜಯಾನಂದ ಗೌಡ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಮುಗುಳಿ ನಾರಾಯಣ ರಾವ್, ಜಯಾನಂದ ಗೌಡ, ರಜನಿ ಕುಡ್ವ, ರಾಜೇಶ್ ಪ್ರಭು, ಸ್ಟಾರ್ ಪ್ರಚಾರಕರಾದ ಅನೀಶ್ ಅಮೀನ್, ಹಿತೇಶ್ ಕಾಪಿನಡ್ಕ, ವಿವಿಧ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅಜಿತ್ ಅರಿಗ, ಜಯಾನಂದ ಕಲ್ಲಾಪು, ದಾಮೋದರ ಗೌಡ ಇದ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಪ್ರಚಾರ ಪ್ರಮುಖ್ ರಾಜೇಶ್ ಪೆಂಬುìಡ ವಂದಿಸಿದರು.