Advertisement
ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿ ಗೋಯಾಡಿಬೆಟ್ಟು ನಿವಾಸಿ ಸಂಜೀವ ಬಂಗೇರ ಅವರ ನಾಲ್ವರು ಮಕ್ಕಳ ಪೈಕಿ ಹರೀಶ್ ಬಂಗೇರ ಎಸ್. ಕೊನೆಯವರು. ದ್ವಿತೀಯ ಪಿಯುಸಿ ಮುಗಿಸಿ ಐಟಿಐ ವಿದ್ಯಾಭ್ಯಾಸ ಪಡೆದು ಬಳಿಕ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಅವರು ಆರು ವರ್ಷಗಳ ಹಿಂದೆ ಸೌದಿಯ ಕಂಪೆನಿಯೊಂದರಲ್ಲಿ ಎಸಿ ಮೆಕ್ಯಾನಿಕ್ ಕೆಲಸಕ್ಕೆ ತೆರಳಿದ್ದರು.
ಪೌರತ್ವ ಮಸೂದೆ ವಿರೋಧಿಸಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ವೀಡಿಯೋವೊಂದನ್ನು ಹರೀಶ್ ಬಂಗೇರ ಎಸ್. ಎನ್ನುವ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಕೂಡಲೇ ಅಲ್ಲಿನ ಯುವಕರು ಹರೀಶ್ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.
Related Articles
Advertisement
ಆದರೆ ಡಿ.20ರಂದು ಮತ್ತೆ ಯಾರೋ ಕಿಡಿಗೇಡಿಗಳು ಹರೀಶ್ ಬಂಗೇರ ಎನ್ನುವ ನಕಲಿ ಫೇಸ್ ಬುಕ್ ಖಾತೆಯಿಂದ ಮೆಕ್ಕಾ ಕುರಿತು, ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಇದು ನಿಂದನಾತ್ಮಕ ಹಾಗೂ ವಿವಾದಾತ್ಮಕವಾಗಿದ್ದು, ಸೌದಿಯಾದ್ಯಂತ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಆತ ದುಬೈನಲ್ಲಿ ಕೆಲಸ ಮಾಡುತ್ತಿದ್ದ ದಮಾಮ್‌ನ ಆಲ್‌ಹಸಾ ಗಲ್ಫ್ ಕಾರ್ಟೂನ್ ಫ್ಯಾಕ್ಟರಿಯಲ್ಲಿ ಕಂಪೆನಿ ಅವರನ್ನು ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಅದರಂತೆ ಡಿ.22ರಿಂದ ಡಿ.23ರವರೆಗೆ ಸುದೀರ್ಘ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.
ಭಾಷೆಯ ಕೊರತೆಯಿಂದ ಸೂಕ್ತ ತರ್ಜುಮೆಗಾರನ ನೆರವು ಪಡೆದು ಪೊಲೀಸರಿಗೆ ಘಟನೆಯ ಬಗ್ಗೆ ವಿವರವಾಗಿ ಮಾಹಿತಿ ನೀಡುತ್ತಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಘಟನೆ ನಡೆಯುತ್ತಿರುವಾಗ ಮನೆಯವರು ಕುಂದಾಪುರ ಠಾಣೆಗೆ ದೂರು ನೀಡಲು ತೀರ್ಮಾನಿಸಿದರು.
ಆದರೆ ಸೆನ್ ಠಾಣೆಗೆ ದೂರು ಸಲ್ಲಿಸುವಂತೆ ಕುಂದಾಪುರ ಪೊಲೀಸರು ತಿಳಿಸಿದ ಕಾರಣ ಡಿ.21ರಂದು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ವರದಿಯನ್ನು ಸೌದಿ ಪೊಲೀಸರಿಗೆ ಉಡುಪಿ ಪೊಲೀಸರು ರವಾನಿಸಿದ್ದಾರೆ ಎನ್ನಲಾಗಿದೆ.
ವಿದೇಶಾಂಗ ಸಚಿವಾಲಯ ಮಧ್ಯ ಪ್ರವೇಶಿಸಲಿಫೇಕ್ ಅಕೌಂಟ್ ಮೂಲಕ ಅವಹೇಳನಕಾರಿ ಪೋಸ್ಟ್ ಮಾಡಲಾಗಿರುವ ವಿಚಾರವನ್ನು ಹರೀಶ್ ಬಂಗೇರ ಎಸ್. ಅವರ ಮನೆಯವರು ಸಂಸದೆ ಶೋಭಾ ಕರಂದ್ಲಾಜೆ ಅವರ ಗಮನಕ್ಕೂ ತಂದಿದ್ದಾರೆ. ಕೆಲವು ದಾಖಲೆಗಳನ್ನು ಕಳುಹಿಸುವಂತೆ ಅವರು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ಥಳೀಯ ಶಾಸಕರು, ವಿದೇಶಾಂಗ ಸಚಿವರು ಮಧ್ಯ ಪ್ರವೇಶಿಸಿ ಈ ಪ್ರಕರಣ ಬಗೆಹರಿಸುವಂತೆ ಮನೆಯವರು ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ. ನಿಷ್ಕ್ರಿಯ ಐಡಿಗೆ ಮತ್ತೆ ಜೀವ?
ವಿಡೀಯೋ ಹಾಗೂ ಅವರು ಅಪ್‌ಲೋಡ್ ಮಾಡಿದ್ದಾರೆ ಎನ್ನಲಾಗುತ್ತಿದ್ದ ಪೋಸ್ಟ್‌ಗಳು ಇಷ್ಟೆಲ್ಲ ವೈರಲ್ ಆಗುತ್ತಿದ್ದಂತೆ ಅವರು ಫೇಸ್ ಬುಕ್ ಐಡಿಯನ್ನು ನಿಷ್ಕ್ರಿಯಗೊಳಿಸಿದ್ದರು. ಆದರೂ ಅವರ ಫೋಟೋ ಉಪಯೋಗಿಸಿಕೊಂಡು ಹರೀಶ್ ಬಂಗೇರ ಎನ್ನುವ ಹೆಸರಲ್ಲಿ ಮತ್ತೂಂದು ಖಾತೆ ಮಾಡಲಾಗಿತ್ತು. ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಉಡುಪಿಯ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ.
– ಸುಮನಾ, ಹರೀಶ್ ಬಂಗೇರ ಅವರ ಪತ್ನಿ ಮಾಹಿತಿ ಕಲೆಹಾಕುತ್ತಿದ್ದೇವೆ
ಕಿಡಿಗೇಡಿಗಳು ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಿ ಆ ಖಾತೆಯಲ್ಲಿ ಹಿಂದೂತ್ವದ ಬಗೆಗಿನ ಬರೆಹಗಳು ಹಾಗೂ ಸೌದಿ ದೊರೆ ಮತ್ತು ಮಕ್ಕಾದ ವಿರುದ್ದ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿ ಹರಿಯಬಿಟ್ಟಿದ್ದಾರೆ ಎಂದು ಹರೀಶ್ ಪತ್ನಿ ಅವರು ಈಗಾಗಲೇ ದೂರು ನೀಡಿದ್ದಾರೆ. ಪೊಲೀಸರು ಫೇಕ್ ಐಡಿ ಪತ್ತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
– ಸೀತಾರಾಮ್, ಇನ್‌ಸ್ಪೆಕ್ಟರ್ ಸೆನ್ ಅಪರಾಧ ಪೊಲೀಸ್ ಠಾಣೆ ತನಿಖೆ ಪ್ರಗತಿಯಲ್ಲಿದೆ
ನಕಲಿ ಫೇಸ್ ಬುಕ್ ಖಾತೆ ಎಂದು ಆರೋಪಿಸಲಾದ ಹರೀಶ್ ಬಂಗೇರ ಎಂಬ ಹೆಸರಿನ ಫೇಸ್ ಬುಕ್ ಖಾತೆಯ ರಿಜಿಸ್ಟ್ರೇಷನ್ ಮತ್ತು ಆಕ್ಸೆಸ್ ವಿವರಗಳನ್ನು ನೀಡುವಂತೆ ಹಾಗೂ ನಕಲಿ ಫೇಸ್ ಬುಕ್ ಖಾತೆಯನ್ನು ಡಿಲಿಟ್ ಮಾಡಲು ಫೇಸ್‌ಬುಕ್ ಕಂಪೆನಿಗೆ ಕೋರಿಕೆ ಪತ್ರವನ್ನು ಕಳುಹಿಸಲಾಗಿದೆ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು.
– ನಿಶಾ ಜೇಮ್ಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು