2019ರಲ್ಲಿ ಹರಿಪ್ರಿಯಾ ನಟಿಸಿದ ಏಳು ಚಿತ್ರಗಳು ಬಿಡುಗಡೆಯಾಗಿದ್ದವು. ಸಿನಿಮಾಗಳ ಮೇಲೆ ಸಿನಿಮಾಗಳಲ್ಲಿ ಬಿಝಿಯಾಗಿದ್ದ ಹರಿಪ್ರಿಯಾ, ವರ್ಷಾರಂಭದಲ್ಲಿ ಬ್ರೇಕ್ ತಗೊಂಡು ಬೇರೆ ಬೇರೆ ಊರು ಸುತ್ತಾಡಿಕೊಂಡು ಬಂದು ರಿಲ್ಯಾಕ್ಸ್ ಆಗಿದ್ದರು. ಈಗ ಮತ್ತೆ ಹರಿಪ್ರಿಯಾ ಸಿನಿಮಾದತ್ತ ಬಂದಿದ್ದಾರೆ. ನೀವದನ್ನು ವರ್ಕ್ಮೂಡ್ ಎಂದು ಕರೆಯಬಹುದು. ಹರಿಪ್ರಿಯಾ ಈಗ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಈ ವರ್ಷವೂ ಬಿಝಿಯಾಗುವ ಸೂಚನೆ ನೀಡಿದ್ದಾರೆ.
ಈ ಬಾರಿ ಹರಿಪ್ರಿಯಾ, ಉಪೇಂದ್ರ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ಕೆ.ಮಾದೇಶ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದು, ಪಾತ್ರದ ಬಗ್ಗೆ ಎಕ್ಸೆ„ಟ್ ಆಗಿದ್ದಾರೆ. “ಕಥೆ ಹಾಗೂ ಪಾತ್ರ ತುಂಬಾ ಚೆನ್ನಾಗಿದೆ. ಬ್ರೇಕ್ನ ನಂತರ ಸಾಕಷ್ಟು ಕಥೆಗಳು ಹುಡುಕಿ ಬಂದವು. ಅದರಲ್ಲಿ ಉಪೇಂದ್ರ ಅವರು ನಾಯಕರಾಗಿರುವ ಸಿನಿಮಾದ ಕತೆ ಇಷ್ಟವಾಯಿತು. ಹೊಸ ಬಗೆಯ ಪಾತ್ರ’ ಎನ್ನುವುದು ಹರಿಪ್ರಿಯಾ ಮಾತು.
ಇದು ಒಂದು ಸಿನಿಮಾದ ಕಥೆಯಾದರೆ, ಇನ್ನೊಂದು ಸಿನಿಮಾ ಯಾವುದೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಈಗಲೇ ಸಿಗಲ್ಲ. ಕಾರಣ, ಹರಿಪ್ರಿಯಾ ಆ ಸಿನಿಮಾದ ಗೌಪ್ಯತೆ ಕಾಪಾಡಿದ್ದಾರೆ. “ಇನ್ನೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದೇನೆ. ಆದರೆ, ಅದರ ಬಗ್ಗೆ ಈಗಲೇ ಹೇಳುವುದು ಸೂಕ್ತವಲ್ಲ. ಮೊದಲು ಈ ಸಿನಿಮಾ ಮುಗಿಸಿಕೊಂಡು ಆ ನಂತರ ಉಪೇಂದ್ರ ಅವರ ಸಿನಿಮಾ ಮಾಡುತ್ತೇನೆ’ ಎನ್ನುವುದು ಹರಿಪ್ರಿಯಾ ಮಾತು. ಅಂದಹಾಗೆ, ಉಪೇಂದ್ರ ನಿರ್ದೇಶನದ ಹೊಸ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನೀಡುತ್ತಿದ್ದಾರೆ.
ಇದು ಉಪ್ಪಿ-ರುಪಿ ಅಲ್ಲ: ಉಪೇಂದ್ರ ಹಾಗೂ ಮಾದೇಶ ಕಾಂಬಿನೇಶನ್ನಲ್ಲಿ ಎರಡು ವರ್ಷಗಳ ಹಿಂದೆ “ಉಪ್ಪಿ-ರುಪಿ’ ಎಂಬ ಸಿನಿಮಾ ಮುಹೂರ್ತ ಕಂಡಿತ್ತು. ರಚಿತಾ ರಾಮ್ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಸಾಧುಕೋಕಿಲ ಅವರ ಸಂಗೀತವಿತ್ತು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಮುಂದುವರೆಯಲಿಲ್ಲ.
ಹಾಗಾದರೆ ಈ ಉಪ್ಪಿ-ಮಾದೇಶ-ಸಾಧುಕೋಕಿಲ ಮೂವರು ಜೊತೆಯಾಗಿರುವ ಪ್ರಾಜೆಕ್ಟ್ ಯಾವುದು? ನಿಂತು ಹೋಗಿದ್ದ “ಉಪ್ಪಿ-ರುಪಿ’ಯೇ ಈಗ ಆರಂಭವಾಗುತ್ತಿದೆಯಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆದರೆ, ಹರಿಪ್ರಿಯಾ ಹೇಳುವಂತೆ, ಆ ಚಿತ್ರಕ್ಕೂ ಈ ಹೊಸ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹೊಸ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದೆಯಂತೆ ಚಿತ್ರತಂಡ. ಚಿತ್ರ ಮೇಯಲ್ಲಿ ಆರಂಭವಾಗುವ ಸಾಧ್ಯತೆ ಇದೆ.