ಬೆಂಗಳೂರು: ಬಹಿರಂಗ ಪ್ರಚಾರದ ಕೊನೆಯ ದಿನವಾದ ಮಂಗಳವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್, ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ, ಕಳೆದ 5 ವರ್ಷಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ಕೇವಲ ಕೋಮುವಾದಕ್ಕೆ ಪುಷ್ಟಿ ನೀಡಿದ ಕೋಮುವಾದಿ ಪಕ್ಷವನ್ನು ತಿರಸ್ಕರಿಸಲು ಮತದಾರರಲ್ಲಿ ಮನವಿ ಮಾಡಿಕೊಂಡರು.
ದೊರೆಸಾನಿ ಪಾಳ್ಯದ ಚರ್ಚ್‌ನಿಂದ ಪ್ರಾರಂಭವಾದ ರೋಡ್ ಶೋ, ದಕ್ಷಿಣ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿತು. ಈ ಚುನಾವಣಾ ಪ್ರಚಾರದಲ್ಲಿ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ದಕ್ಷಿಣ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಾವು ರೂಪಿಸಿರುವ ಪ್ರಣಾಳಿಕೆಯನ್ನು ವಿವರಿಸಿದರು.
ಪ್ರಣಾಳಿಕೆ: ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಯ ಫಲದಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬೋಟಾನಿಕಲ್ ಗಾರ್ಡನ್ ನಿರ್ಮಿಸುವುದು. ಹೊರವರ್ತುಲ ರಸ್ತೆಯ ಆಚೆಗೂ ಮೆಟ್ರೋ ರೈಲನ್ನು ವಿಸ್ತರಿಸುವುದು ಹಾಗೂ ಮೋನೋ ರೈಲ್ ಸೌಲಭ್ಯವನ್ನು ಅಳವಡಿಸುವುದು.
ವಿಶ್ವ ಗುಣಮಟ್ಟದ ಕನ್ವೆಕ್ಷನ್ ಸೆಂಟರ್ ನಿರ್ಮಾಣ ಮಾಡುವುದು. ಸ್ಯಾಂಕಿ ಕೆರೆ ರೀತಿಯಲ್ಲಿ ಕ್ಷೇತ್ರದ ಕೆರೆಗಳ ಅಭಿವೃದ್ಧಿ. ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣ. ಚಿಕ್ಕ ರಸ್ತೆಗಳಲ್ಲಿ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಬದ್ಧªನಾಗಿದ್ದೇನೆ ಎಂದರು. ಯು.ಬಿ. ವೆಂಕಟೇಶ್, ರಾಜ್ಯ ಸಭಾ ಸದಸ್ಯ ರಾಜೀವ್ ಗೌಡ ಸೇರಿದಂತೆ ಹಲವರು ರೋಡ್ ಶೋನಲ್ಲಿ ಭಾಗವಹಿಸಿದ್ದರು.