ಬೆಂಗಳೂರು: ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯ ಉಸ್ತುವಾರಿ ವಿಧಾನ ಪರಿಷತ್ ವಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 510 ಕಿ.ಮೀ. ದೂರ 21 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಕೆಲವು ಕಡೆ ಅರಣ್ಯ ಪ್ರದೇಶವಿದ್ದು, ಅಲ್ಲಿ ನಡೆಯಬೇಕೇ ಬೇಡವೇ ಎಂಬ ವಿಚಾರವಾಗಿ ಸ್ಥಳೀಯ ಪೊಲೀಸರ ಜತೆ ಚರ್ಚಿಸಿ ದಿಲ್ಲಿಯ ತಂಡ ತೀರ್ಮಾನಿಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ 8 ಜಿಲ್ಲೆಗಳ ಮೂಲಕ ಈ ಪಾದಯಾತ್ರೆ ಸಾಗಲಿದ್ದು, ಬಳ್ಳಾರಿ ಹೊರತಾಗಿ ಚಿತ್ರದುರ್ಗ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಮಾರ್ಗವನ್ನು ಖುದ್ದಾಗಿ ನೋಡಿದ್ದೇನೆ. ಇಡೀ ರಾಜ್ಯದ ಕಾರ್ಯಕರ್ತರು ಹಾಗೂ ಮುಖಂಡರು ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದರು.
ಭಾರತವನ್ನು ಒಗ್ಗೂಡಿಸಲು, ಶಾಂತಿ, ಸೌಹಾರ್ದ ಸ್ಥಾಪಿಸಿ, ಜನರ ಸಮಸ್ಯೆಯನ್ನು ಚರ್ಚಿಸಲು ದೇಶಾದ್ಯಂತ ಸುಮಾರು 600ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಸೇರಲಿದ್ದಾರೆ. ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಕರೆದು ಭಾರತ್ ಜೋಡೋ ಕಾರ್ಯಕ್ರಮ ಕುರಿತು ಚರ್ಚಿಸುತ್ತೇವೆ. ಅದಕ್ಕೂ ಮೊದಲು ಇಂದು ಪ್ರಾಥಮಿಕವಾಗಿ ನಾನು ಹಾಗೂ ಹರಿಪ್ರಸಾದ್ ದಿಲ್ಲಿ ತಂಡದ ಜತೆ ಚರ್ಚಿಸುತ್ತಿದ್ದೇವೆ ಎಂದು ತಿಳಿಸಿದರು.
ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾರ್ವಕರ್ ಫೋಟೋ ಹಾಕಿರುವ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡಬೇಕಿರುವುದು ಅವರ ಜವಾಬ್ದಾರಿ. ದೇಶದಲ್ಲಿ ಕಾಂಗ್ರೆಸಿಗರು ಇನ್ನೂ ಬದುಕಿದ್ದಾರೆ. ನಾವು ಪ್ರಚೋದನಕಾರಿ ಹೇಳಿಕೆ ನೀಡಿ, ಕಾಂಗ್ರೆಸಿಗರನ್ನು ಎತ್ತಿ ಕಟ್ಟಿ, ಕಪ್ಪು ಬಾವುಟ ಹಿಡಿಯಿರಿ ಎಂದು ಹೇಳುವ ಅಗತ್ಯವಿಲ್ಲ ಎಂದರು.