Advertisement

ಪೂಜಾರಿ ಅವರಿಗೆ ಸಚಿವ ರೈ ಅವಾಚ್ಯ ನಿಂದನೆ: ಹರಿಕೃಷ್ಣ ಬಂಟ್ವಾಳ ಆರೋಪ

03:35 AM Jun 29, 2017 | Team Udayavani |

ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು, ಕಾಂಗ್ರೆಸ್‌ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ನೂರಾರು ಜನರ ಸಮ್ಮುಖದಲ್ಲಿ ಅತ್ಯಂತ ಕೀಳು ಭಾಷೆಯಿಂದ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಕಾಂಗ್ರೆಸ್‌ನ ಮಾಜಿ ಮುಖಂಡ ಹಾಗೂ ಸಾಮಾಜಿಕ ಮುಂದಾಳು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ದೇಶದಲ್ಲಿಯೇ ಅತ್ಯಂತ ಪ್ರಾಮಾಣಿಕ ಎಂದು ಹೆಸರು ಗಳಿಸಿರುವ, ಕೇಂದ್ರದ ಸಚಿವರಾಗಿ ಹಾಗೂ ರಮಾನಾಥ ರೈ ಅವರನ್ನು ರಾಜಕೀಯವಾಗಿ ಬೆಳೆಸುವಲ್ಲಿ, ಅವರಿಗೆ ರಾಜಕೀಯ ಅವಕಾಶಗಳನ್ನು ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೂಜಾರಿ ಅವರನ್ನೇ ಈ ರೀತಿ ಅವಮಾನಿಸಿರುವುದು, ನಮ್ಮ ಸಮಾಜಕ್ಕೆ ಅತ್ಯಂತ ನೋವು ತಂದಿದೆ ಎಂದು ಹರಿಕೃಷ್ಣ ಬಂಟ್ವಾಳ ಅವರು ಕಣ್ಣೀರಿಟ್ಟರು.

Advertisement

ಫೆ. 6ರಂದು ಸುರತ್ಕಲ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಚಿವ ರೈ ಅವರು, ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರುಣ್‌ ಕುವೆಲ್ಲೋ ಹಾಗೂ ಯುವ ಕಾಂಗ್ರೆಸ್‌ ನಾಯಕ ತೇಜಸ್ವಿ ರಾಜ್‌ ಎದುರಲ್ಲೇ ಜನಾರ್ದನ ಪೂಜಾರಿ ಹಾಗೂ ಕಳ್ಳಿಗೆ ತಾರಾನಾಥ ಶೆಟ್ಟಿ ಅವರ ಬಗ್ಗೆ ಅತ್ಯಂತ ಕೀಳು ರೀತಿಯ ಕೆಟ್ಟ ಪದಗಳನ್ನು ಪ್ರಯೋಗಿಸಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಉಚ್ಚಾಟಿಸಲಿ
ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಅವರಿಗೆ ಜನಾರ್ದನ ಪೂಜಾರಿ ಬಗ್ಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಕಾಂಗ್ರೆಸ್‌ನ ಹಿರಿಯ ನಾಯಕರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ಕೆಟ್ಟ ಪದಗಳಿಂದ ಕೀಳಾಗಿ ಮಾತನಾಡಿರುವ ಕುರಿತಂತೆ ಪಕ್ಷದ ಯುವ ನಾಯಕ ಅರುಣ್‌ ಕುವೆಲ್ಲೋ ಅವರನ್ನು ಕರೆಸಿಕೊಂಡು ಪೂರ್ಣ ಮಾಹಿತಿಯೊಂದಿಗೆ ತನಿಖೆ ನಡೆಸಬೇಕು. ಕಾಂಗ್ರೆಸ್‌ ಜಾತ್ಯತೀತ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಈ ಮಣ್ಣಿನ ಸಂಸ್ಕೃತಿಯನ್ನು ಹೊಂದಿರುವ ಪಕ್ಷವಾಗಿರುವುದು ಹೌದಾದರೆ, ಇಂತಹ ಕೀಳು ಭಾಷೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾತನಾಡಿದ ಸಚಿವ ರೈ ಅವರನ್ನು ಉಚ್ಚಾಟಿಸಿ, ಸಚಿವ ಪದದಿಂದ ಕೆಳಗಿಳಿಸಬೇಕು ಎಂದು ಹರಿಕೃಷ್ಣ ಬಂಟ್ವಾಳ ಆಗ್ರಹಿಸಿದರು.

ನನ್ನ 42 ವರ್ಷಗಳ ರಾಜಕೀಯ ಜೀವನದಲ್ಲಿ 34 ವರ್ಷಗಳ ಕಾಲ ಜನಾರ್ದನ ಪೂಜಾರಿ ಜತೆ ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ಅವರು ಈವರೆಗೂ ಯಾರನ್ನೂ ಏಕವಚನದಲ್ಲಿ ನಿಂದಿಸಿದವರಲ್ಲ. ಪಕ್ಷಕ್ಕೆ ತೊಂದರೆಯಾಗುತ್ತದೆ ಎನ್ನುವ ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರಶ್ನಿಸಿ ಟೀಕಿಸಿರಬಹುದೇ ಹೊರತು ಯಾರನ್ನೂ ಉದ್ದೇಶ ಪೂರ್ವಕವಾಗಿ ನಿಂದಿಸಿದವರಲ್ಲ ಎಂದು ಹರಿಕೃಷ್ಣ ತಿಳಿಸಿದರು. ದೇಶದ ಖ್ಯಾತನಾಮರ ಶ್ಲಾಘನೆಗೆ ಪಾತ್ರರಾದ ಪೂಜಾರಿ ಅವರನ್ನು ಸಚಿವ ರೈ ಅವರು ನಿಂದಿಸಿದ್ದು ಕರಾವಳಿ ಭಾಗಕ್ಕೆ ಮಾಡಿದ ಅಪಚಾರವಾಗಿದೆ ಎಂದವರು ಹೇಳಿದರು.

ರೈ ಅವರನ್ನೇ ವರ್ಗಾಯಿಸಿ !
1981ರಲ್ಲಿ ಜನಾರ್ದನ ಪೂಜಾರಿ ಅವರು ಸಂಸದರಾಗಿದ್ದನಿಂದ ಸಚಿವ ರೈ ಅವರು ಜನಾರ್ದನ ಪೂಜಾರಿ ಜತೆ ಗುರುತಿಸಿಕೊಂಡು ಅವರ ಶಿಫಾರಸಿನ ಮೇರೆಗೆ ಶಾಸಕ ಸ್ಥಾನಕ್ಕೆ ಟಿಕೆಟ್‌ ಗಿಟ್ಟಿಸಿಕೊಂಡವರು. ರೈಯವರು ಆರಂಭದಲ್ಲಿ ಎಂಎಲ್‌ಎ ಆಗಿರುವುದು ಪೂಜಾರಿಯವರ ಕೊಡುಗೆ. ತಾನು ಸರ್ವಧರ್ಮ ಪ್ರೇಮಿ ಎಂದು ಹೇಳುವ ಸಚಿವ ರೈ, ವಾಸ್ತವದಲ್ಲಿ ಹೃದಯದಿಂದ ಯಾರನ್ನೂ ಪ್ರೀತಿಸುವುದಿಲ್ಲ. ಸಾಮರಸ್ಯ ಬಯಸುವುದಿಲ್ಲ. ಒಂದು ವೇಳೆ ಎಲ್ಲರನ್ನೂ ಪ್ರೀತಿಸುವ ಮನಸ್ಸು ಅವರಿಗಿದ್ದರೆ, ಹಿರಿಯ ನಾಯಕ ಪೂಜಾರಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರಲಿಲ್ಲ. ಸಾಮರಸ್ಯ ಬಯಸುವವರಾಗಿದ್ದರೆ ಸಚಿವ ರೈ ಅವರು, ನಾಲ್ಕು ವರ್ಷದ ಅವಧಿಯಲ್ಲಿ ಎಲ್ಲ ಧರ್ಮಗಳ ಧರ್ಮಗುರುಗಳನ್ನು ಕರೆಸಿ ಸಾಮರಸ್ಯ ಸಭೆ ನಡೆಸುತ್ತಿದ್ದರು. ಗಲಭೆ ಆದ ಸಂದರ್ಭ ಎಸ್‌ಪಿ, ಕಮಿಷನರ್‌, ಕಾನ್ಸ್‌ಟೆಬಲ್‌ ಅವರನ್ನು ಟ್ರಾನ್ಸ್‌ಫರ್‌ ಮಾಡಲಾಗುತ್ತಿದೆ. ಆದರೆ ಸಚಿವ ರೈ ಅವರನ್ನೇ ಮುಖ್ಯಮಂತ್ರಿಗಳು ಟ್ರಾನ್ಸ್‌ಫರ್‌ ಮಾಡಿದರೆ ಕರಾವಳಿಯಲ್ಲಿ ಯಾವುದೇ ಸಮಸ್ಯೆ ಆಗಲಾರದು ಎಂದು ಹರಿಕೃಷ್ಣ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next