Advertisement

ಹರಿಹರೇಶ್ವರ ಬ್ರಹ್ಮ ರಥೋತ ರಥೋತ್ಸವ

03:53 PM Feb 28, 2021 | Team Udayavani |

ಹರಿಹರ: “ದಕ್ಷಿಣ ಕಾಶಿ’ ಖ್ಯಾತಿಯ ಶ್ರೀ ಹರಿಹರೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಗರದಲ್ಲಿ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ-ಸಂಭ್ರಮದಿಂದ ನೆರವೇರಿತು.  ಬೆಳಗ್ಗೆ 11:15ಕ್ಕೆ ಮೇಘ ಲಗ್ನದ ಶುಭ ಮಹೂರ್ತದಲ್ಲಿ ಶಾಸಕ ಎಸ್‌. ರಾಮಪ್ಪ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

Advertisement

ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ. ಶಿವಮೊಗ್ಗ ವೃತ್ತದವರೆಗೆ ಭಕ್ತ ಜನರು ಹರ ಹರ ಮಹಾದೇವ್‌, ಗೋವಿಂದಾ.. ಗೋವಿಂದಾ… ಎಂದು ನಾಮಸ್ಮರಣೆ ಮಾಡುತ್ತಾ ರಥ ಎಳೆದರು.

ಕೆಲವರು ತೇರಿನ ಮುಕುಟಕ್ಕೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದರು. ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ರಥ ಶಿವಮೊಗ್ಗ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನಗರದ ಶಿವಮೊಗ್ಗ,  ಹರಪನಹಳ್ಳಿ ಹಾಗೂ ದಾವಣಗೆರೆ ಮಾರ್ಗ ಬಂದ್‌ ಆಗಿದ್ದರಿಂದ ಒಂದು ಕಿಮೀಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ ಹನಗವಾಡಿ, ನಗರಸಭೆ ಸದಸ್ಯರು, ದೇವಸ್ಥಾನ ಸಮಿತಿ ಸದಸ್ಯರು, ಜನಪ್ರತಿನಿಧಿ ಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವಕ್ಕೂ ಮುನ್ನ ಶ್ರೀ ಹರಿಹರೇಶ್ವರ ಸ್ವಾಮಿ ಹಾಗೂ ಲಕ್ಷ್ಮೀದೇವಿಗೆ ಗಣಪತಿ ಪೂಜೆ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಪೂಜೆ, ಜಪ, ಹೋಮ ಹವನಾದಿಗಳನ್ನು ನಡೆಸಲಾಯಿತು. ಗ್ರಾಮದ ಶಾನಭೋಗರು, ಪಟೇಲರು ಹಾಗೂ ಮುಜರಾಯಿ ಇಲಾಖಾಧಿ ಕಾರಿಗಳು ಉಪಸ್ಥಿತರಿದ್ದರು. ನಂತರ ಪುರಾಣ ಪ್ರಸಿದ್ಧ ಹರಿಹರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ರಥದೊಳಗೆ ಪ್ರತಿಷ್ಠಾಪಿಸಲಾಯಿತು.

ಪ್ರತಿ ವರ್ಷ ನಡೆಯುವ ರಥೋತ್ಸವಕ್ಕೆ ಬೆಂಗಳೂರು, ಹಾಸನ, ಅರಸೀಕೆರೆ, ಕಡೂರು, ಬೀರೂರು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೈಲಾರ ಜಾತ್ರೆಗೆ ಹೋಗುವ ಮತ್ತು ಅಲ್ಲಿಂದ ಬರುವ ಭಕ್ತರು ಹರಿಹರೇಶ್ವರನ ದರ್ಶನ ಪಡೆಯುವುದು ವಾಡಿಕೆ. ಆದರೆ ಮೈಲಾರ ಜಾತ್ರೆ ರದ್ದಾದ ಪರಿಣಾಮ ಭಕ್ತರ ಸಂಖ್ಯೆ ವಿರಳವಾಗಿತ್ತು. ಫೆ. 28 ರಂದು ಭಾನುವಾರ ಸ್ಥಾಪಿತ ದೇವತಾ ಪೂಜೆ, ನಾಂದಿ ಕಂಕಣ ವಿಸರ್ಜನೆ, ಧ್ವಜ ವಿಸರ್ಜನೆ, ಅವಭೃತ ಸ್ನಾನಗಳೊಂದಿಗೆ ರಥೋತ್ಸವ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next