ಹರಿಹರ: ಸರ್ಕಾರ ಆಶ್ರಯ ಯೋಜನೆಯಡಿ ನೀಡಿರುವ ಮನೆಗಳನ್ನು ಖಾಲಿ ಮಾಡುವಂತೆ ಜಮೀನಿನ ಮಾಲಿಕ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ತಮಗೆ ಸಂಬಂಧವೆ ಇಲ್ಲವೆಂಬಂತೆ ಮೌನ ವಹಿಸಿರುವುದನ್ನು ಖಂಡಿಸಿ ಮಹಿಳೆಯರು ವಿಷದ ಬಾಟಲಿ ಹಿಡಿದು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಮಳಲಹಳ್ಳಿ ಗ್ರಾಮದ ನಿವೇಶನ ರಹಿತರಿಗೆ ಸರ್ಕಾರ 1975ರಲ್ಲಿ ಗ್ರಾಮದ ಸರ್ವೇನಂ 1ರ ಖಾಸಗಿ ಜಮೀನನ್ನು ಸ್ವಾ ಧೀನ ಪಡಿಸಿಕೊಂಡು ಅರ್ಹ 33 ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿ ಹಕ್ಕು ಪತ್ರಗಳ ಸಹಿತ ಹಸ್ತಾಂತರ ಮಾಡಲಾಗಿತ್ತು. ಆದರೆ ಜಮೀನಿನ ಮಾಲೀಕರು ಸರ್ಕಾರ ತಮ್ಮ ಜಮೀನಿನಲ್ಲಿ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿ ಆಶ್ರಯ ಮನೆಗಳನ್ನು ನಿರ್ಮಿಸಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈಗ ನ್ಯಾಯಾಲಯ ತಮ್ಮ ಪರವಾಗಿ ತೀರ್ಪ ನೀಡಿದೆ ಎಂದು ಹೇಳಿಕೊಂಡು ಕೂಡಲೇ ನೀವು ಮನೆಗಳನ್ನು ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಬಸವರಾಜಪ್ಪ ಹೇಳಿದರು.
ಸರ್ಕಾರ ಸೂರು ಇಲ್ಲದವರಿಗೆ ಸೂರನ್ನು ನೀಡಿದೆ. ಇದನ್ನೇ ನಂಬಿ ಕಳೆದ 30 ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಸರ್ಕಾರ ಮತ್ತು ಮಾಲೀಕರ ಜಗಳದಲ್ಲಿ ನಾವು ಬೀದಿಗೆ ಬೀಳುವಂತಾಗಿದೆ. ಆಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಮನೆಗಳನ್ನು ಉಳಿಸಿ ಕೊಡಬೇಕು. ಇಲ್ಲವಾದರೆ ನಾವು ಸಾಮೂಹಿಕವಾಗಿ ವಿಷಸೇವಿಸಿ ಆತ್ಮಹತ್ಯೆ ಮಾಡಿ ಕೊಳ್ಳಬೇಕಾಗುತ್ತದೆ ಎಂದು ಫಲಾನುಭವಿ ಗಿರಿಜಮ್ಮ ಎಚ್ಚರಿಕೆ ನೀಡಿದರು.
ರೈತ ಮುಖಂಡ ಬೇವಿನಹಳ್ಳಿ ಮಹೇಶ್ ಮಾತನಾಡಿ, ಎಳೆಹೊಳೆಯ ಓಂಕಾರಪ್ಪ ಸಹೋದರರು ಸರ್ಕಾರದ ಆಶ್ರಯ ಬಡಾವಣೆಗಾಗಿ 1 ಎಕರೆ 5 ಗುಂಟೆ ಜಮೀನು ಮಾರಾಟ ಮಾಡಿದ್ದರು. ತದ ನಂತರ ಸಹೋದರ ನಡುವೆ ನಡೆದ ಆಸ್ತಿಕಲಹದಿಂದ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಸರ್ಕಾರದ ಪರವಾಗಿ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗ ಬೇಕಿತ್ತು. ಅ ಧಿಕಾರಿಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದರು.
ನಿವಾಸಿಗಳಾದ ಮಂಜಪ್ಪ, ಪರುಸಪ್ಪ, ಹನುಂತಪ್ಪ, ತಿಮ್ಮಪ್ಪ, ಗದಿಗೆಮ್ಮ, ಯಲ್ಲಮ್ಮ, ಲಲಿತಮ್ಮ, ಗಿರಿಜಮ್ಮ, ಗುತ್ಯಮ್ಮ, ಮಂಜಮ್ಮ, ಕರಿಬಸಪ್ಪ, ಆನಂದಪ್ಪ, ಬಸವರಾಜಪ್ಪ, ಟಿ.ಬಿ. ರಾಜಪ್ಪ ಇತರರಿದ್ದರು.