Advertisement

ಜನಸಂಖ್ಯಾ ಸ್ಫೋಟದಿಂದ ಮೂಲ ಸೌಲಭ್ಯಗಳಿಗೆ ಕುತ್ತು

10:25 AM Jul 13, 2019 | Naveen |

ಹರಿಹರ: ದಿನೇ ದಿನೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆಹಾರ, ನೀರು, ಬಟ್ಟೆ, ವಸತಿಗೆ ಕುತ್ತು ಬಂದಿದೆ ಎಂದು ಡಾ| ಶಶಿಕಲಾ ಡಿ.ಎನ್‌. ನುಡಿದರು.

Advertisement

ತಾಲೂಕಿನ ಕೊಂಡಜ್ಜಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅರಣ್ಯ, ಸಸ್ಯ ಸಂಪತ್ತಿನ ನಾಶವಾಗುತ್ತಿದೆ. ಸೀಮಿತವಾಗಿರುವ ಖನಿಜಾಂಶಗಳು ಬರಿದಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆ, ವಾಯು, ಜಲ, ಶಬ್ದ ಮಾಲಿನ್ಯ ಸೇರಿದಂತೆ ಇಂದಿನ ಎಲ್ಲಾ ಸಮಸ್ಯೆಗಳಿಗೆ ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆಯೇ ಮೂಲ ಕಾರಣವಾಗಿದೆ. ಸರ್ಕಾರಗಳು ಏನೇ ಶಿಕ್ಷಣ, ಆರೋಗ್ಯ ಸೇವೆ ಕಲ್ಪಿಸುತ್ತಿದ್ದರೂ ಅದು ಸಾಕಾಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಕೊಳಚೆ ಪ್ರದೇಶಗಳು ಹೆಚ್ಚುತ್ತಿವೆ. ಸಾರಿಗೆ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ವಿವಿಧ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದರು.

ಗಂಡು ಮಕ್ಕಳು ಕನಿಷ್ಟ 21, ಹೆಣ್ಣು ಮಕ್ಕಳು ಕನಿಷ್ಠ 18 ವರ್ಷ ಮೇಲ್ಪಟ್ಟ ನಂತರವೇ ವಿವಾಹವಾಗಬೇಕು. ಮದುವೆ ನಂತರ ಕನಿಷ್ಠ 3 ವರ್ಷದವರೆಗೆ ಮಕ್ಕಳನ್ನು ಪಡೆಯಬಾರದು. ಜನನಗಳ ನಡುವೆ ಕನಿಷ್ಠ 3 ವರ್ಷಗಳ ಅಂತರವಿರಬೇಕು. ದಂಪತಿಗಳು ಗರಿಷ್ಠ 2 ಮಕ್ಕಳನ್ನು ಮಾತ್ರ ಹೊಂದುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

ಗ್ರಾಪಂ ಸದಸ್ಯ ತಿಪ್ಪಣ್ಣ ಮಾತನಾಡಿ, ಪೋಷಕರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರು ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.

Advertisement

ಆರೋಗ್ಯ ಸಹಾಯಕ ಎಂ.ಉಮ್ಮಣ್ಣ ಮಾತನಾಡಿ, ವಿಶ್ವ ಜನಸಂಖ್ಯೆ 500 ಕೋಟಿಯನ್ನು ದಾಟಿದ್ದರಿಂದ 1987ರ ಜು. 11ರಿಂದ ಪ್ರತಿವರ್ಷ ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಶಾಲಾ ಮಕ್ಕಳು ಜನಸಂಖ್ಯಾ ನಿಯಂತ್ರಣದ ಘೋಷ ವಾಕ್ಯಗಳ ಫಲಕಗಳನ್ನು ಹಿಡಿದು, ಘೋಷಣೆ ಕೂಗತ್ತಾ ಜಾಗೃತಿ ಮೂಡಿಸಿದರು.

ಗ್ರಾಪಂ ಸದಸ್ಯರಾದ ಗೌರಮ್ಮ, ಶಿಕ್ಷಕರಾದ ನೀಲಪ್ಪ, ವಿಜಯಮ್ಮ, ಆರೋಗ್ಯ ಸಿಬ್ಬಂದಿಗಳಾದ ದೇವೇಂದ್ರಪ್ಪ, ಜಯರಾಂ, ಸುನಿತಾ, ಕಸ್ತೂರಮ್ಮ, ಅಂಬಿಕಾ, ಆಶಾ ಕಾರ್ಯಕರ್ತೆಯರಾದ ವೀರಮ್ಮ, ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ರುದ್ರಮ್ಮ, ಶಾಲಾ ಮಕ್ಕಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next