Advertisement

ಹರಿಹರ ಪಲ್ಲತ್ತಡ್ಕ: ವೈನ್‌ ಶಾಪ್‌ಗೆ ವಿರೋಧ, ವಿಶೇಷ ಗ್ರಾಮಸಭೆಗೆ ಆಗ್ರಹ

10:19 PM Mar 17, 2021 | Team Udayavani |

ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ವೈನ್‌ ಶಾಪ್‌ ತೆರೆಯಲು ಪ್ರಯತ್ನ ನಡೆಸುತ್ತಿರುವುದರ ಬೆನ್ನಲ್ಲೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

Advertisement

ಹರಿಹರ ಪಲ್ಲತ್ತಡ್ಕ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಒಕ್ಕೂಟದವರು ಸೇರಿದಂತೆ ಎಲ್ಲರು ವೈನ್‌ ಶಾಪ್‌ ತೆರೆಯುವುದನ್ನು ವಿರೋಧಿಸಿದ್ದು, ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಪಕ್ಷ ಭೇದ ಮರೆತು ಎಲ್ಲರು ವೈನ್‌ ಶಾಪ್‌ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

1994ರಲ್ಲಿ ಮದ್ಯದಂಗಡಿ ವಿರೋಧಿ ಹೋರಾಟದ ಅಧ್ಯಕ್ಷರಾಗಿದ್ದ ದುರ್ಗಾ ದಾಸ್‌ ಮಲ್ಲಾರ ಅಂದಿನ ಹೋರಾಟಗಳ ಕುರಿತು ಬೆಳಕು ಚೆಲ್ಲಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಹಿಮ್ಮತ್‌ ಕೆ.ಸಿ., ಸತೀಶ್‌ ಕೂಜುಗೋಡು, ವಿನೂಪ್‌ ಮಲ್ಲಾರ, ಮಾಧವ ಚಾಂತಳ, ಪ್ರದೀಪ್‌ ಕುಮಾರ್‌ ಕೆ. ಎಲ್‌., ಸತೀಸ್‌ ಟಿ.ಎನ್‌. ಮೊದಲಾದವರು ವಿರೋಧ ವ್ಯಕ್ತಪಡಿಸಿ ಮಾತನಾಡಿದರು.

ವಿಶೇಷ ಗ್ರಾಮ ಸಭೆ ನಡೆಸುವುದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಸಹಿತ ಹಲವಾರು ವಿಚಾರಗಳ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸಂತೋಷ್‌ ಕುಮಾರ್‌ ರೈ, ದುರ್ಗಾದಾಸ್‌ ಮಲ್ಲಾರ, ಹರಿಹರ ಗ್ರಾ.ಪಂ. ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ, ಸದಸ್ಯರಾದ ಬಿಂದು ಪಿ., ಅನಂತ, ನ್ಯಾಯವಾದಿ ಪ್ರದೀಪ್‌ ಕುಮಾರ್‌ ಕೆ.ಎಲ್‌. ಪುಷ್ಪರಾಜ್‌ ಪಡು³ ಉಪಸ್ಥಿತರಿದ್ದರು.

Advertisement

ಸಮಿತಿ ರಚನೆ
ಸಭೆಯಲ್ಲಿ ಮದ್ಯದಂಗಡಿ ವಿರೋಧಿ ಸಮಿತಿ ರಚಿಸಲಾಯಿತು. ಗೌರವಾ ಧ್ಯಕ್ಷರಾಗಿ ದುರ್ಗದಾಸ್‌ ಮಲ್ಲಾರ, ಅಧ್ಯಕ್ಷರಾಗಿ ಹಿಮ್ಮತ್‌ ಕೆ.ಸಿ., ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಜತೆ ಕಾರ್ಯದರ್ಶಿ ಬಿಂದು ಪಿ. ಉಪಾದ್ಯಕ್ಷ ಹಾಗೂ ಕಾನೂನು ಸಲಹೆಗಾರರಾಗಿ ಪ್ರದೀಪ್‌ ಕೆ.ಎಲ್‌., ಉಪಾದ್ಯಕ್ಷರುಗಳಾಗಿ ಸತೀಶ್‌ ಟಿ.ಎನ್‌, ಚಂದ್ರಹಾಸ ಶಿವಾಲ, ಮಾದವ ಚಾಂತಳ, ಅನಂತ ಅಂಗಣ, ಜಯರಾಮ ಕರಂಗಲ್ಲು, ನಿತ್ಯಾನಂದ ಭೀಮಗುಳಿ, ಗೌರವ ಸಲಹೆಗಾರರಾಗಿ ಪಂ. ಹಾಗೂ ಒಕ್ಕೂಟದ ಎಲ್ಲ ಅಧ್ಯಕ್ಷರು, ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ರಾಜ್ಯದಲ್ಲೇ ಗಮನ ಸೆಳೆದಿತ್ತು
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ 1994ರಲ್ಲಿ ಮದ್ಯದಂಗಡಿ ವಿರೋಧಿ ಚಳುವಳಿ ಪ್ರಥಮ ಬಾರಿಗೆ ಈ ಭಾಗದಲ್ಲಿ ನಡೆದಿತ್ತು. ಈ ಭಾಗದ ಎಲ್ಲ ಗ್ರಾಮದವರು ಒಗ್ಗಟ್ಟು ಪ್ರದರ್ಶಿಸಿದ್ದರು. ನಾಗರಿಕರ ಹೋರಾಟದ ಫ‌ಲವಾಗಿ 1994 ಜುಲೈ ತಿಂಗಳಿನಿಂದ ಮದ್ಯದಂಗಡಿ ತೆರವುಗೊಂಡಿತ್ತು. ಪ್ರಥಮ ಬಾರಿಗೆ ರಾಜ್ಯದಲ್ಲೇ ಸರಕಾರದ ಲೈಸೆನ್ಸ್‌ ಪಡೆದ ಮದ್ಯದಂಗಡಿಯನ್ನು ಬಂದ್‌ ಆದ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿತ್ತು. ಅನಂತರದಲ್ಲಿ ಊರಿನಲ್ಲಿ ನೆಮ್ಮದಿ ಮೂಡಿತ್ತು. ಇದೀಗ ಮತ್ತೆ ಅಂಗಡಿ ತೆರೆಯುವದಕ್ಕೆ ವ್ಯಾಪಕ ವಿರೋಧ ವ್ಯಕ್ರವಾಗಿದ್ದು, ಯೋಜನೆಯವರು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ಗ್ರಾ.ಪಂ.ಗೆ ಈಗಾಗಲೆ ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next