Advertisement

ಭತ್ತ ಖರೀದಿ ಕೇಂದ್ರ ಆರಂಭಿಸಿ: ತೇಜಸ್ವಿ

05:45 PM May 27, 2020 | Naveen |

ಹರಿಹರ: ತಾಲೂಕಿನಲ್ಲಿ ರೈತರು ಈಗಾಗಲೇ ಅರ್ಧದಷ್ಟು ಭತ್ತ ಕಟಾವು ಮುಗಿಸಿದ್ದು, ಕೂಡಲೆ ಹರಿಹರ ಹಾಗೂ ಮಲೆಬೆನ್ನೂರು ಹೋಬಳಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರ ತೆರೆದು ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರ ಭತ್ತ ಖರೀದಿಸಲು ಮುಂದಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್‌ ಆಗ್ರಹಿಸಿದರು.

Advertisement

ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳೊಂದಿಗೆ ಮಂಗಳವಾರ ನಗರದ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಮಾತ್ರ ಖರೀದಿ ಕೇಂದ್ರ ತೆರೆದಿದ್ದು ಇದರಿಂದ ರೈತರಿಗೆ ಸಾಗಾಣಿಕೆ ಹೊರೆಯಾಗುತ್ತಿದೆ ಎಂದರು. ಕ್ವಿಂಟಲ್‌ ಭತ್ತಕ್ಕೆ ಸರ್ಕಾರ ಘೋಷಿಸಿರುವ 1815 ರೂ. ಯಾವುದಕ್ಕೂ ಸಾಲುವುದಿಲ್ಲ. ಇದನ್ನು 2500 ರೂ.ಗೆ ಹೆಚ್ಚಿಸಬೇಕು. ಆನ್‌ಲೈನ್‌ ನೋಂದಣಿ ಗೊಂದಲ ನಿವಾರಿಸಬೇಕು. ಒಬ್ಬ ರೈತನಿಂದ ಕೇವಲ 40 ಕ್ವಿಂಟಲ್‌ಗೆ ಮಿತಿಗೊಳಿಸಿರುವುದು ಸರಿಯಲ್ಲ, ಪಹಣಿ ಆಧರಿಸಿ ಪೂರ್ತಿ ಬೆಳೆಯನ್ನು ಖರೀದಿಸಬೇಕೆಂದರು.

ರೈತ ಮುಖಂಡ ವಾಸನದ ಎಚ್‌. ಓಂಕಾರಪ್ಪ ಮಾತನಾಡಿ, ಹಿಂದಿನ ಹಂಗಾಮಿನಲ್ಲಿ ಕ್ವಿಂಟಲ್‌ಗೆ 2000 ರಿಂದ 2200 ರೂ.ವರೆಗೆ ಇದ್ದ ಭತ್ತದ ದರ, ಈಗ ಕೇವಲ 1400 ರಿಂದ 1500 ರೂ. ಆಗಿದೆ. ರೈತರು ಮಾಡಿದ್ದ ಖರ್ಚು ಸಹ ವಾಪಾಸಾಗದೆ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಬೆಂಬಲ ಬೆಲೆ ಹೆಚ್ಚಿಸಬೇಕು ಹಾಗೂ ಖರೀದಿ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಪಾಟೀಲ್‌ ಮಾತನಾಡಿದರು. ರೈತ ಸಂಘದ ಶಂಭುಲಿಂಗಪ್ಪ, ಧರ್ಮರಾಜ್‌, ಶಿವಶಂಕರಪ್ಪ, ಶಿವಯ್ಯ, ಉಮ್ಮಣ್ಣ, ಚಂದ್ರಶೇಖರಯ್ಯ, ಲೋಕೇಶ್‌, ಬಸವರಾಜ್‌, ನಂದೀಶ್‌, ಮಹೇಶ್ವರಪ್ಪ ದೊಗ್ಗಳ್ಳಿ, ಜಗದೀಶ್‌ ಜಿಗಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next