Advertisement

ಮೇರಿ ಮಾತೆ ಮಹೋತ್ಸವ

11:50 AM Sep 09, 2019 | Naveen |

ಹರಿಹರ: ಇಲ್ಲಿನ ಆರೋಗ್ಯಮಾತೆ ಚರ್ಚ್‌ನಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆದ ಮೇರಿ ಮಾತೆ ಮಹೋತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

Advertisement

ಮಹಾದಿನವಾದ ಭಾನುವಾರ ನಸುಕಿನಿಂದಲೇ ಆರಂಭವಾದ ಪೂಜಾ ವಿಧಿಗಳಲ್ಲಿ ಬೆಳ್ತಂಗಡಿಯ ಭದ್ರಾವತಿಯ ಧರ್ಮಾಧ್ಯಕ್ಷ ಡಾ| ಜೋಸೆಫ್‌ ಅರುಮಚಾಡತ್‌ ನೇತೃತ್ವದಲ್ಲಿ ಕನ್ನಡ, ತೆಲುಗು, ಮಲಯಾಳಂ, ಬೆಂಗಳೂರು ಸಂತಪೇತ್ರರ ಗುರು ವಿದ್ಯಾಮಂದಿರದ ಡಾ| ರಾಯಪ್ಪನ್‌ ಇಂಗ್ಲಿಷ್‌ ಭಾಷೆಯಲ್ಲಿ, ಬೆಳಗಾವಿ ಧರ್ಮಾಧ್ಯಕ್ಷ ಫಾ. ಡಾ|ಡೆರಿಕ್‌ ಫೆರ್ನಾಂಡಿಸ್‌ ಕೊಂಕಣಿಯಲ್ಲಿ ಬಲಿ ಪೂಜೆ ನಡೆಸಿದರು.

ಮಧ್ಯಾಹ್ನ 11ಕ್ಕೆ ಪುರಪ್ರವೇಶ ಮಾಡಿದ ಶಿವಮೊಗ್ಗ ಧರ್ಮಾಧ್ಯಕ್ಷ ಡಾ| ಪ್ರಾನ್ಸಿಸ್‌ ಸೆರಾವೋ ಅವರನ್ನು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಯಿತು. ಮಧ್ಯಾಹ್ನ 11-30ಕ್ಕೆ ಕನ್ನಡದಲ್ಲಿ ಹಬ್ಬದ ಸಹಬಲಿಪೂಜೆ, 2 ಘಂಟೆಗೆ ಪರಮ ಪ್ರಸಾದದ ವಿಶೇಷ ಆರಾಧನೆ ನೆರವೇರಿತು. ಚರ್ಚ್‌ನ ಫಾ. ಡಾ| ಅಂತೋನಿ ಪೀಟರ್‌ ಮತ್ತಿತರೆ ಗಣ್ಯರು ಪಾಲ್ಗೊಂಡಿದ್ದರು.

ಭಕ್ತಿ, ಸಡಗರದ ರಥೋತ್ಸವ: ಸಂಜೆ 5-30ಕ್ಕೆ ಪುಷ್ಪಾಲಾಂಕೃತ ತೇರಿನಲ್ಲಿ ಆರೋಗ್ಯ ಮಾತೆಯ ಮೂರ್ತಿಯನ್ನಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಮತ್ತೆ ಆರೋಗ್ಯ ಮಾತೆ ದೇವಾಲಯಕ್ಕೆ ಮರಳಿತು. ಮೆರವಣಿಗೆಯಲ್ಲಿ ಸಹಸ್ರಾರು ಜನರು ಭಕ್ತಿ, ಸಡಗರದಿಂದ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಜಪಸರ, ನವೇನ ಪ್ರಾರ್ಥನೆ, ಪುಷ್ಪಾರ್ಚನೆ, ಪ್ರಬೋಧನೆ ಮಾಡುತ್ತಾ ಜನರು ಭಾವಪರವಶರಾಗಿ ಸಾಗುತ್ತಿದ್ದ ದೃಶ್ಯ ಕಂಡುಬಂತು.

ಬೆಳಿಗ್ಗೆಯಿಂದಲೆ ಚರ್ಚ್‌ನ ಸಮೀಪ ಜನರು ತಮ್ಮ ಹರಕೆಯಂತೆ ಕೇಶ ಮುಂಡನೆಗಾಗಿ ಜನ ಸಾಲುಗಟ್ಟಿ ನಿಂತಿದ್ದರು. ಪಾಪ ನಿವೇದನೆಗೆಂದು ಹಲವರು ಹಿರಿಯ ಗುರುಗಳಿಗೆ ಭಕ್ತರು ಮುಗಿಬೀಳುತ್ತಿದ್ದರು. ರೋಗಿಗಳಿಗೋಸ್ಕರ ಪತ್ಯೇಕ ಪ್ರಾರ್ಥನೆ ನಡೆಯಿತು. ದೂರದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದಲೇ ಉದ್ದನೆಯ (ದೀಡ್‌) ನಮಸ್ಕಾರ ಹಾಕುತ್ತಾ ಚರ್ಚ್‌ಗೆ ಸಾಗುತ್ತಿದ್ದ ದೃಶ್ಯ ವಿಶೇಷವಾಗಿತ್ತು.

Advertisement

ಹರಿಹರ ಮಾತೆ ಸಮಾಧಾನದ ರಾಣಿ, ಸಂಧಾನದ ಮುಕುಟಮಣಿ ಎಂಬ ಧ್ಯೇಯ ವಾಕ್ಯದಡಿ ಅ.30 ರಿಂದ ಹಮ್ಮಿಕೊಂಡಿದ್ದ ಪ್ರಸಕ್ತ ಮಹೋತ್ಸವದಲ್ಲಿ ಮೈಸೂರು ಧರ್ಮಕ್ಷೇತ್ರದ ಫಾ.ಡಾ| ಆರೋಗ್ಯ ಸ್ವಾಮಿ, ಬೆಂಗಳೂರಿನ ಧರ್ಮಾಧ್ಯಕ್ಷ ಫಾ.ಡಾ| ಪೀಟರ್‌ ಪೌಲ್ ಸಲ್ಡಾನ್‌ ಹಾಗೂ ಇತರೆ ಧರ್ಮಗುರುಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next