Advertisement

ನಗರಸಭೆ ಮೆಟ್ಟಿಲೇರಲು ತೀವ್ರ ಪೈಪೋಟಿ

10:31 AM May 27, 2019 | Naveen |

ಹರಿಹರ: ಲೋಕಾಮಹಾಸಮರದ ನಂತರ ಇಲ್ಲಿನ ನಗರಸಭೆಯ ಮಿನಿ ಸಮರದಲ್ಲಿ ವಿಜಯಪತಾಕೆ ಹಾರಿಸಲು ವಿವಿಧ ರಾಜಕೀಯ ಪಕ್ಷಗಳು ಪೈಪೋಟಿ ನಡೆಸಿದ್ದು, ಹಲವಾರು ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳೂ ಸಹ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

Advertisement

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಎಲ್ಲಾ 31 ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 25 ವಾರ್ಡ್‌ಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಬಿಎಸ್‌ಪಿ, ಕೆಪಿಜೆಪಿ ಪಕ್ಷಗಳು ತಲಾ ನಾಲ್ಕು ವಾರ್ಡ್‌, ಎಸ್‌ಡಿಪಿಐ ಒಂದು ವಾರ್ಡ್‌ನಲ್ಲಿ ತಮ್ಮ ಅಭ್ಯರ್ಥಿ ನಿಲ್ಲಿಸಿದೆ. ಒಟ್ಟು 41 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶದಿಂದ ಬಿಜೆಪಿ ಕಾರ್ಯಕರ್ತರು, ಮುಖಂಡರ ಉತ್ಸಾಹ ಇಮ್ಮಡಿಗೊಂಡಿದೆ. ಇದೇ ಫಲಿತಾಂಶ ಒಂದು ತಿಂಗಳ ಮುಂಚೆ ಬಂದಿದ್ದರೆ ಎಲ್ಲಾ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಲ್ಲಾ 31 ವಾರ್ಡ್‌ ಗೆಲ್ಲುತ್ತಿದ್ದೆವು ಎಂದು ಸ್ವತಃ ಮಾಜಿ ಶಾಸಕ ಬಿ.ಪಿ. ಹರೀಶ್‌ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಕಳೆದ ಕೌನ್ಸಿಲ್ನಲ್ಲಿ ಸದಸ್ಯರಾಗಿದ್ದ ಹಲವರು ಪುನರಾಯ್ಕೆ ಬಯಸಿ, ಮತ್ತೆ ಕೆಲವು ಅಭ್ಯರ್ಥಿಗಳು ಮೀಸಲಾತಿಗೆ ಹೊಂದಿಕೆಯಾಗುವಂತೆ ವಾರ್ಡ್‌ ಬದಲಾಯಿಸಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೀಸಲಾತಿ ಮತ್ತಿತರೆ ಕಾರಣಗಳಿಂದಾಗಿ ಹಲವು ಘಟಾನುಘಟಿಗಳು ಈ ಸಲ ಸ್ಪರ್ಧೆಯಿಂದ ದೂರ ಉಳಿಯಬೇಕಾಗಿದ್ದರೆ ಮತ್ತೆ ಕೆಲವರು ತಮ್ಮ ಪತ್ನಿ, ಸಹೋದರರಿಗೆ ಟಿಕೆಟ್ ಕೊಡಿಸಿ ಬೆನ್ನಿಗೆ ನಿಂತು ಹೋರಾಡುತ್ತಿದ್ದಾರೆ.

ಈ ಸಲದ ವಿಶೇಷತೆಗಳು
ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ವರ್ಗಕ್ಕೆ ಮೀಸಲಾಗಿದ್ದು, ಜೈಭೀಮ ನಗರ ಆ ವರ್ಗಕ್ಕೆ ಮೀಸಲಿರುವ ಏಕೈಕ ವಾರ್ಡ್‌ ಆಗಿರುವುದರಿಂದ ಅಲ್ಲಿ ಗೆಲ್ಲುವ ಅಭ್ಯರ್ಥಿ ಮುಂದಿನ ಎರಡೂವರೆ ವರ್ಷ ನಗರಸಭೆ ಅಧ್ಯಕ್ಷರಾಗುವುದು ಬಹುತೇಕ ಖಚಿತ. ಹೀಗಾಗಿ ಅಲ್ಲಿನ ಟಿಕೆಟ್‌ಗೆ ಭಾರಿ ಪೈಪೋಟಿ ನಡೆದು ಕೊನೆಗೆ ಕಾಂಗ್ರೆಸ್‌ನಿಂದ ರಾಘವೇಂದ್ರ ಓಲೇಕಾರ್‌, ಜೆಡಿಎಸ್‌ನಿಂದ ಆರ್‌.ದಿನೇಶ್‌ ಬಾಬು, ಬಿಜೆಪಿಯಿಂದ ಶ್ಯಾಮರಾಜ್‌ ಕೆ. ಅಲ್ಲದೆ ಬಿಎಸ್‌ಪಿಯಿಂದ ಬಸವರಾಜಪ್ಪ ಸ್ಪರ್ಧಿಸಿದ್ದಾರೆ.

Advertisement

•ಅಮರಾವತಿಯಲ್ಲಿ ಎ.ಬಿ.ನಾಗರಾಜ್‌ ಮತ್ತು ಅವರ ಸಹೋದರ ಎ.ಬಿ.ಮಲ್ಲೇಶಪ್ಪ ಮಗ ವಿಜಯಕುಮಾರ್‌ ಪರಸ್ಪರ ಎದುರಾಳಿಗಳಾಗಿದ್ದಾರೆ. ಮುಂಚೆ ಹನಗವಾಡಿ ತಾಪಂಗೆ ಸೇರಿದ್ದ ಈ ಗ್ರಾಮದ ಗ್ರಾಪಂ ಸದಸ್ಯರಾಗಿದ್ದ ಕೆ.ಎಚ್.ಯೋಗೇಶಪ್ಪ ಈಗ ನಗರಸಭೆ ಸದಸ್ಯರಾಗಲು ಪ್ರಯತ್ನ ನಡೆಸಿದ್ದಾರೆ.

•ಹೊಸಪೇಟೆ ಬೀದಿಯಲ್ಲಿ ಕಾಂಗ್ರೆಸ್‌ನ ಸುನಂದಾ ಭೂತೆ ಮತ್ತು ಜೆಡಿಎಸ್‌ನ ಲಕ್ಷ್ಮೀ ದುರುಗೋಜಿ ಇಬ್ಬರೇ ಕಣದಲ್ಲಿದ್ದು, ನೇರ ಸ್ಪರ್ಧೆಯಿದೆ.

•ಗಾಂಧಿ ನಗರ ವಾರ್ಡ್‌ನಲ್ಲಿ ರಿಯಾಜ್‌ ಪಠಾಣ್‌, ಬೆಂಕಿ ನಗರದಲ್ಲಿ ಗೌಸಿಯಾ ಬಾನು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ಬಿ.ಎಂ. ಸಿದ್ಧಲಿಂಗಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next