ಹರಿಹರ: ಕಾನೂನು ಜ್ಞಾನ ಕೇವಲ ನ್ಯಾಯಾಧೀಶರು, ವಕೀಲರಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬರಿಗೂ ನಿತ್ಯ ಜೀವನದಲ್ಲಿ ಅತ್ಯವಶ್ಯವಾದ ತಿಳಿವಳಿಕೆಯಾಗಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಶಂಶೀರ್ ಅಲಿಖಾನ್ ಹೇಳಿದರು.
ಕಾನೂನು ಸಾಕ್ಷರತಾ ರಥಯಾತ್ರೆಯ ಅಂಗವಾಗಿ ನಗರದ ಗಿರಿಯಮ್ಮ ಕಾಂತಪ್ಪ ಶ್ರೇಷ್ಟಿ ಮಹಿಳಾ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನು ಪಾಲಿಸದೆ ಇರುವ ಸಂದರ್ಭದಲ್ಲಿ ಪರಿಣಾಮವನ್ನು ಖಚಿತವಾಗಿ ಎದುರಿಸಬೇಕಾಗುತ್ತದೆ. ಆದ್ದರಿಂದ ಜನಸಾಮಾನ್ಯರು, ವಿದ್ಯಾರ್ಥಿಗಳಿಗೆ ಸಾಮಾನ್ಯ ಕಾನೂನು ಜ್ಞಾನ ಅತ್ಯವಶ್ಯ. ಇದೇ ಕಾರಣಕ್ಕೆ ಸಾಕ್ಷರಥಾ ರಥ ಯಾತ್ರೆ ಕೈಗೊಳ್ಳಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ಜೀವನ ನಡೆಸಲು ಹಾಗೂ ಬದುಕಿನ ಕಷ್ಟ, ನಷ್ಟ, ನೋವುಗಳಿಂದ ದೂರವಿರಲು ಕಾನೂನು ಬೇಕೆ ಬೇಕು ಎಂದರು.
ಉಪನ್ಯಾಸ ನೀಡಿದ ವಕೀಲರಾದ ಜಿ.ಎಚ್.ಭಾಗೀರಥಿ, ಮಹಿಳೆಯರ ಮೇಲೆ ನಡೆಯವ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಲೈಂಗಿಕ ದೌರ್ಜನ್ಯ, ಶೋಷಣೆ ತಡೆಯಲು ಕಾನೂನು ಜ್ಞಾನ ಅತ್ಯಗತ್ಯ. ಲೈಂಗಿಕ ಕಿರುಕಳದಂತಹ ಅಪರಾಧಗಳಿಗೆ ಕಠಿಣ ಕಾನೂನುಗಳಿದ್ದು, ಸಂಕೋಚ ಪಡದೇ ಕಾನೂನು ನೆರವು ಪಡೆಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಪಿಐ ಗುರುನಾಥ್ ಐ.ಎಸ್. ಮಾತನಾಡಿ, ಬದುಕಿಗೆ ಕಾನೂನು ಜ್ಞಾನ ಹಾಗೂ ಸಾಮಾನ್ಯ ಜ್ಞಾನ ಎರಡೂ ಅತ್ಯವಶ್ಯಕ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಇದ್ದಾಗ ಮಾತ್ರ ಯಾವುದೇ ಜ್ಞಾನ ಸಂಪಾದಿಸಿಕೊಳ್ಳಲು ಸಾಧ್ಯ. ಪಠ್ಯದೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಾಹಿತ್ಯ ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕು ಎಂದರು.
ಪದವಿ ಕಾಲೇಜು ಪ್ರಾಚಾರ್ಯ ಎಸ್.ಎಚ್. ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಸುರೇಶ್ ಕುಮಾರ್ ವೈ., ಪಪೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.