Advertisement

ವಿಕಲಚೇತನರಿಗೆ ಅನುದಾನ ವಿನಿಯೋಗ ಕಡ್ಡಾಯ

09:55 AM Jul 28, 2019 | Naveen |

ಹರಿಹರ: ವಿಕಲಚೇತನರ ಕಲ್ಯಾಣಕ್ಕೆ ಶೇ.5ರಷ್ಟು ಅನುದಾನವನ್ನು ವಿನಿಯೋಗಿಸುವುದು ಗ್ರಾಪಂನಿಂದ ಹಿಡಿದು ಎಲ್ಲಾ ಹಂತದ ಸ್ಥಳೀಯ ಸಂಸ್ಥೆಗಳಿಗೆ ಕಡ್ಡಾಯವಾಗಿದೆ ಎಂದು ತಾಪಂ ಇಒ ಜಿ.ಡಿ.ಗಂಗಾಧರ ಹೇಳಿದರು.

Advertisement

ವಿಕಲಚೇತನರಲ್ಲಿ ಕೌಶಲ್ಯ ಅಭಿವೃದ್ಧಿ, ಪುನರ್ವಸತಿ, ಸಬಲೀಕರಣ ಸಂಯುಕ್ತ ವಿಭಾಗೀಯ ಕೇಂದ್ರ, ವಿಕಲಚೇತನರ ಗ್ರಾಮೀಣ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ತಾಲೂಕು ಘಟಕದಿಂದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ವಿಕಲಚೇತನರಿಗೆ ವೃತ್ತಿ ತರಬೇತಿ, ಮಹತ್ವ ಕುರಿತ ಒಂದು ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೇ.5ರ ಅನುದಾನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಶ್ರವಣ ಸಾಧನ, ಕ್ಲಚಸ್‌, ವಾಕರ್‌, ಗಾಲಿ ಕುರ್ಚಿ ವಿತರಣೆ ಹಾಗೂ ಅವರ ವೈದ್ಯಕೀಯ, ಶೈಕ್ಷಣಿಕ ವೆಚ್ಚ, ಸ್ವಯಂ ಉದ್ಯೋಗಕ್ಕೆ ಹಣಕಾಸು ನೆರವಿಗೆ ಬಳಸಬೇಕು. ಆದರೆ ಫಲಾನುಭವಿಗಳು ಹೆಚ್ಚಿದ್ದಾರೆಂದು ಇದರಲ್ಲಿ ವಿಕಲಚೇತನರಿಗೆ ಟೇಬಲ್ ಫ್ಯಾನ್‌, ಸೋಲಾರ್‌ ಲೈಟು, ಪ್ಲಾಸ್ಟಿಕ್‌ ಚೇರ್‌ ವಿತರಣೆ ಮಾಡಬಾರದು ಎಂದರು.

ಈ ಅನುದಾನವನ್ನು ಕೆಲವೆಡೆ ವಿಕಲಚೇತನರು ಇರುವ ಬಡಾವಣೆಯ ರಸ್ತೆ, ಚರಂಡಿಗೆಂದು ಇಲ್ಲವೆ ಕಚೇರಿಗೆ ವಿಕಲಚೇತನರು ಬಂದು ಹೋಗಲು ರ್‍ಯಾಂಪ್‌ಗೆಂದು ಬಳಸುತ್ತಿರುವುದು ತಿಳಿದಿದೆ. ಆದರೆ ಇದು ತಪ್ಪು. ಈ ಕುರಿತು ಸರಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. ಜಿಪಂ ಸಿಇಒ ಕೂಡ ಇದನ್ನು ಕಡ್ಡಾಯವಾಗಿ ಪಾಲಿಸಲು ಆದೇಶಿಸಿದ್ದಾರೆ. ಇದನ್ನು ಮೀರುವ ಅಧಿಕಾರಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದರು.

ಎಲ್ಲಾ ಗ್ರಾಪಂ ಪಿಡಿಒಗಳು ತಮ್ಮ ವ್ಯಾಪ್ತಿಯ ವಿಕಲಚೇತನರ ಅಗತ್ಯತೆಗಳನ್ನು ಪಟ್ಟಿ ಮಾಡಿ ತಾಪಂಗೆ ತಲುಪಿಸಬೇಕು. ಗ್ರಾಮ ಪುನರ್ವಸತಿ ಕಾರ್ಯಕರ್ತರು ವಿಕಲಚೇತನರ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಒಟ್ಟಿನಲ್ಲಿ ಶೇ.5ರ ಅನುದಾನ ಫಲಾನುಭವಿಗಳ ಬದುಕನ್ನು ಹಸನು ಮಾಡಲು ಮಾತ್ರ ಬಳಕೆಯಾಗಬೇಕಿದೆ ಎಂದರು.

ವಿಕಲಚೇತನರಲ್ಲಿ ಕೌಶಲ್ಯ ಅಭಿವೃದ್ಧಿ, ಪುನರ್ವಸತಿ, ಸಬಲೀಕರಣ ಸಂಯುಕ್ತ ವಿಭಾಗೀಯ ಕೇಂದ್ರದ ಅಧಿಕಾರಿ ಸುರೇಶ್‌ ಚಂದ್ರಕೇಸರಿ ಮಾತನಾಡಿ, ದಾವಣಗೆರೆ ದೇವರಾಜ್‌ ಅರಸ್‌ ಬಡಾವಣೆಯಲ್ಲಿರುವ ಕೇಂದ್ರದಲ್ಲಿ 37 ಬಗೆಯ ಕೌಶಲ್ಯದ ಕುರಿತು ತರಬೇತಿ ನೀಡಿ ಸ್ವಾವಲಂಬಿಗೊಳಿಸಲಾಗುವುದು. ಆಭರಣ ತಯಾರಿಕೆ, ಪೇಪರ್‌ ಬ್ಯಾಗ್‌, ಗ್ಲಾಸ್‌ ಪೇಂಟಿಂಗ್‌ ಇತರೆ ಮೌಲ್ಯಯುತ ಹಾಗೂ ಸಮಾಜದಲ್ಲಿ ಬೇಡಿಕೆ ಇರುವ ಕೌಶಲ್ಯಗಳ ಕುರಿತು ಉಚಿತವಾಗಿ ತರಬೇತಿ ನೀಡಲಾಗುತ್ತಿದ್ದು, ಫಲಾನುಭವಿಗಳು ಉಪಯೋಗ ಪಡೆದುಕೊಳ್ಳಬೇಕು ಎಂದರು.

Advertisement

ರಾಜ್ಯ ವಿಕಲಚೇತನರ ಸಲಹಾ ಸಮಿತಿ ಸದಸ್ಯೆ ಅನಿತಾ ಪಾಟೀಲ ಮಾತನಾಡಿ, ಇಲಾಖೆಯ ರಾಜ್ಯಮಟ್ಟದ ವಿಕಲಚೇತನರ ಸಲಹಾ ಸಮಿತಿಯಲ್ಲಿ ಮಂಡನೆಯಾಗುವ ವಿಷಯಗಳನ್ನಾಧರಿಸಿ ಸರಕಾರ ನೀತಿ ರೂಪಿಸುತ್ತದೆ. ವಿಕಲಚೇತನರು ಹಾಗೂ ಸಾಮಾಜಿಕ ಕಾರ್ಯಕರ್ತರು, ಅಧಿಕಾರಿಗಳು ಯಾವುದಾದರು ಅನಿಸಿಕೆಗಳಿದ್ದರೆ ತಮ್ಮ ಗಮನಕ್ಕೆ ತರಬಹುದಾಗಿದೆ ಎಂದರು.

ವಿಕಲಚೇತನರ ಗ್ರಾಮೀಣ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ತಾಲೂಕು ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಮಾತನಾಡಿ, ಕೇಂದ್ರ ಸರಕಾರದ ವಿಕಲಚೇತನರಲ್ಲಿ ಕೌಶಲ್ಯ ಅಭಿವೃದ್ಧಿ, ಪುನರ್ವಸತಿ, ಸಬಲೀಕರಣ ಸಂಯುಕ್ತ ವಿಭಾಗೀಯ ಕೇಂದ್ರಕ್ಕಾಗಿ ದಾವಣಗೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ 10 ಎಕರೆ ಜಮೀನು ಮಂಜೂರಾಗಿದೆ. ಅಲ್ಲಿ ಕಟ್ಟಿದ ನಿರ್ಮಾಣಕ್ಕೆ ಅನುದಾನವೂ ಬಿಡುಗಡೆಯಾಗಿದೆ. ಈ ಕೇಂದ್ರವು ರಾಜ್ಯ, ಆಂಧ್ರ ಪ್ರದೇಶ ಮತ್ತು ಗೋವಾ ರಾಜ್ಯಗಳ ವಿಕಲಚೇತನರಿಗೆ ಕೌಶಲ್ಯ ತರಬೇತಿ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದರು. ಸ್ಥಳೀಯ ಸಂಸ್ಥೆಗಳ ಜತೆಗೆ ಶಾಸಕರು, ಸಂಸದರು ಕೂಡ ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಶೇ.5ರ ಅನುದಾನವನ್ನು ಆಯಾ ಕ್ಷೇತ್ರದ ವಿಕಲಚೇತನರ ಅಭಿವೃದ್ಧಿಗಾಗಿ ಬಳಸಬೇಕಿದೆ. ಮಾಹಿತಿ ಕೊರತೆಯೋ, ಅಥವಾ ಕಾರ್ಯ ಒತ್ತಡದಿಂದಲೋ ಆ ಅನುದಾನ ಬಳಕೆಯಲ್ಲಿ ಲೋಪ ಉಂಟಾಗುತ್ತಿದೆ. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕಿದೆ ಎಂದರು.

ತಾಪಂ ಅಧಿಕಾರಿ ಪಿ.ಎಸ್‌.ಅನಂತರಾಜು ಮಾತನಾಡಿ, ಎನ್‌ಆರ್‌ಎಲ್ಎಂ ನಲ್ಲಿ ನೋಂದಣಿ ಮಾಡಿಸಿಕೊಂಡು ಅಲ್ಲಿಂದಲೂ ಸೌಲಭ್ಯಗಳನ್ನು ಪಡೆಯಬಹುದು. ವೃತ್ತಿ ತರಬೇತಿ ಪಡೆದು ಸರಕಾರದಿಂದ ಸಾಲ ಸೌಲಭ್ಯವನ್ನೂ ಪಡೆಯಬಹುದಾಗಿದೆ ಎಂದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಗಂಗಾಧರ್‌ ಡಿ.ಎಚ್., ಚಂದ್ರಪ್ಪ ಡಿ., ಬಸವರಾಜ ಪಿ., ಹನುಮಂತಪ್ಪ ವೈ. ಹಾಗೂ ತಾಲೂಕಿನ ವಿಕಲಚೇತನರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next