ಹರಿಹರ: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನೆಡೆಸಿ, ಗ್ರೇಡ್-2 ತಹಶೀಲ್ದಾರ್ ಆರ್.ವೆಂಕಟಮ್ಮರಿಗೆ ಮನವಿ ಸಲ್ಲಿಸಿದರು.
ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ನಗರದ ಪಕ್ಕೀರಸ್ವಾಮಿ ಮಠದಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿದರು. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲ ಸಮಯ ರಸ್ತೆ ತಡೆ ನಡೆಸಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಂಖಡರು, ಕಳೆದ ಬಜೆಟ್‌ನಲ್ಲಿಯೇ ಎಸ್‌ಸಿ, ಎಸ್ಟಿ ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಲಾಗಿತ್ತು ಆದರೆ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಒಂದು ತಿಂಗಳಾದರೂ ಬಸ್ ಪಾಸ್ ಸಿಗದಿರುವುದು ವಿದ್ಯಾರ್ಥಿಗಳ ಬಗೆಗಿನ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಬಸ್ ಪಾಸ್ ಸೌಲಭ್ಯ ಪಡೆಯುತ್ತಾರೆ. ಸತತ ಬರಗಾಲದಿಂದ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು, ಮಕ್ಕಳ ಪ್ರಯಾಣ ವೆಚ್ಚ ಭರಿಸುವುದೂ ಕಷ್ಟಕರವಾಗಿದೆ. ಸರ್ಕಾರದ ಧೋರಣೆಯಿಂದ ಗ್ರಾಮೀಣ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ಉಚಿತ ಬಸ್ ಪಾಸ್ ನೀಡಲು ಹಣವಿಲ್ಲವೆಂಬ ನೆಪವೊಡ್ಡಿದ್ದ ಸರ್ಕಾರ ಈ ವರ್ಷವಾದರೂ ಕೂಡಲೇ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಎಬಿವಿಪಿ ಪದಾಧಿಕಾರಿಗಳಾದ ಕುಮಾರ್ ಕರೂರು, ಮಹಾಂತೇಶ್, ಶಿವು, ಚೇತು, ಸಿಂಧು, ವಿದ್ಯಾ, ಮಾಧುರಿ, ಆಶಾ, ಸುಮಾ, ವಿಂಧ್ಯಾ ಮತ್ತಿತರೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು