ಹರಿಹರ: ನಗರದ ಮರಿಯಾ ಸದನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ, ಹರಿಹರ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಹಾಗೂ ನಮ್ಮ ಹರಿಹರ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಮಾತೆ ಚರ್ಚ್‌ನ ಫಾ.ಫ್ರಾoಕ್ಲಿನ್ ಡಿಸೋಜಾ, ಸಾಮಾಜಿಕ ಕಳಕಳಿ, ಬದ್ಧತೆ ಹೊಂದಿರುವ ಪತ್ರಿಕೆಗಳು ಮಾತ್ರ ಜನ ಮೆಚ್ಚುಗೆ ಗಳಿಸಲು ಸಾಧ್ಯ.
ಪತ್ರಕರ್ತರೆಂಬ ಹಣೆಪಟ್ಟಿಗಾಗಿ ಆರಂಭಿಸಿದ ಪತ್ರಿಕೆಗಳಿಂದ ಹೊಸತನ ನಿರೀಕ್ಷಿಸಲಾಗದು. ಪತ್ರಿಕೆಗಳು ಸಮಾಜದಲ್ಲಿ ವೈಚಾರಿಕತೆ, ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು. ನಿವೃತ್ತ ಡಯಟ್ ಉಪನ್ಯಾಸಕ ಎಚ್. ಎಸ್. ಶಿವಕುಮಾರ್ ಮಾತನಾಡಿ, ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಆಧಾರಸ್ತಂಭ.
ಮಾಧ್ಯಮ ಆರೋಗ್ಯಕರವಾಗಿದ್ದಲ್ಲಿ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಕಾಣಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಹರಿಹರ ಕಾವ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಗಳೂರಿನ ಕವಿಯತ್ರಿ ಗೀತಾ, ರವಿ ಕಾಣದ್ದನ್ನು ಕವಿ ಕಂಡ ಎಂಬ ಗಾದೆ ಮಾತು ಸಮಾಜದಲ್ಲಿನ ಕವಿಗಳ ಮಹತ್ವವನ್ನು ಸಾರುತ್ತದೆ.
ಒಂದು ಪುಟ ಗದ್ಯದ ಸಾರವನ್ನು ಒಂದು ಕವನದಲ್ಲಿ ಹಿಡಿದಿಡುವ ಸಾಮರ್ಥ್ಯ ಕವಿಗೆ ಇರಬೇಕಾಗುತ್ತದೆ ಎಂದರು. ನಂತರ ನಡೆದ ಕವಿಗೋಷ್ಠಿಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ 27 ಕವಿಗಳು ಕವನ ವಾಚಿಸಿದರು. ಎಸ್‌ಜೆಪಿವಿ ವಿದ್ಯಾಪೀಠದ ಸಿಇಒ ಪ್ರೊ| ಸಿ.ವಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಲೇಖಕ ರಾಜಶೇಖರ್ ಗುಂಡಗಟ್ಟಿ, ಸಮಾಜ ಸೇವಕಿ ಆಲಿಸ್ ಲೋಮನ್, ಪತ್ರಕರ್ತರಾದ ಡಿ. ಫ್ರಾನ್ಸಿಸ್ ಕ್ಸೇವಿಯರ್, ಕೆ. ಜೈಮುನಿ, ಶಾಂಭವಿ ನಾಗರಾಜ್, ಕರವೇ ತಾಲೂಕು ಅಧ್ಯಕ್ಷ ಇಲಿಯಾಸ್, ರಮೇಶ್ ಮಾನೆ, ಎಚ್.ಎಸ್ .ಪರಮೇಶ್ವರ, ವರ್ಜೀನಿಯಾ ಮೇರಿ ಇತರರಿದ್ದರು.