Advertisement

2 ಏಕದಿನ ನಿಷೇಧದ ಭೀತಿಯಲ್ಲಿ ಹಾರ್ದಿಕ್‌, ರಾಹುಲ್‌

12:40 AM Jan 11, 2019 | Team Udayavani |

ನವದೆಹಲಿ: ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ಟೀವಿ ಕಾರ್ಯಕ್ರಮ, ಕಾಫಿ ವಿತ್‌ ಕರಣ್‌ನಲ್ಲಿ ಭಾಗವಹಿಸಿ ಪಶ್ಚಾತ್ತಾಪ ಪಡುತ್ತಿರುವುದಲ್ಲದೇ, ಭಾರೀ ಅಪಾಯಕ್ಕೂ ಎದೆಯೊಡ್ಡಬೇಕಾದ ಸಂದಿಗ್ಧ ಸ್ಥಿತಿಗೆ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ ತಲುಪಿದ್ದಾರೆ. 

Advertisement

ಮಾಡಿರುವ ತಪ್ಪಿಗೆ ಹಾರ್ದಿಕ್‌ ಕ್ಷಮೆಯಾಚಿಸಿದ್ದರೂ, ಅದು ತನಗೆ ಸಮಾಧಾನ ತಂದಿಲ್ಲ. ಇಬ್ಬರನ್ನೂ 2 ಏಕದಿನ ಪಂದ್ಯಗಳ ಮಟ್ಟಿಗೆ ನಿಷೇಧಿಸಲು ಶಿಫಾರಸು ಮಾಡಿದ್ದೇನೆ. ಸಹ ಆಡಳಿತಾಧಿಕಾರಿ ಡಯಾನ ಎಡುಲ್ಜಿ ಈ ಬಗ್ಗೆ ಕಾನೂನಾತ್ಮಕ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಅದಾದ ಬಳಿಕ ಅಂತಿಮ ನಿರ್ಧಾರ ಮಾಡಲಾಗುವುದೆಂದು ವಿನೋದ್‌ ರಾಯ್‌ ಹೇಳಿದ್ದಾರೆ.

ಕಾಫಿ ವಿತ್‌ ಕರಣ್‌ ಕಾರ್ಯಕ್ರಮದಲ್ಲಿ ಮಹಿಳೆಯರೊಂದಿಗೆ ತನಗಿರುವ ಸಂಬಂಧವನ್ನು ಬಹಳ ದೊಡ್ಡ ಸಾಧನೆಯೆಂಬಂತೆ ಹಾರ್ದಿಕ್‌ ವರ್ಣಿಸಿದ್ದರು. ಹಲವಾರು ಮಹಿಳೆಯರೊಂದಿಗೆ ತಾನು ಸಂಬಂಧ ನಿಭಾಯಿಸುತ್ತೇನೆ, ಜೊತೆಗೆ ಅವನ್ನೆಲ್ಲ ಪೋಷಕರಿಗೆ ಹೇಳಿಯೇ ಮಾಡುತ್ತೇನೆ ಎಂದು ಹಾರ್ದಿಕ್‌ ಹೇಳಿಕೊಂಡಿದ್ದರು. ಇದು ಮಹಿಳೆಯರ ಬಗ್ಗೆ ಅವರಿಗಿರುವ ಪೂರ್ವಾಗ್ರಹ ಪೀಡಿತ ಹಾಗೂ ಅಶ್ಲೀಲ ಭಾವನೆಯನ್ನು ಪ್ರತಿಧ್ವನಿಸುತ್ತದೆ ಎಂದು ವಿವಾದವೆದ್ದಿತ್ತು. ಇದೇ ಸಂದರ್ಶನದಲ್ಲಿ ಸಚಿನ್‌ಗಿಂತ ವಿರಾಟ್‌ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದಿದ್ದೂ ಚರ್ಚೆಗೆ ಕಾರಣವಾಗಿತ್ತು.ವಿವಾದವೆದ್ದ ಬೆನ್ನಲ್ಲೇ ಬಿಸಿಸಿಐ ಇಬ್ಬರಿಗೂ ನೋಟಿಸ್‌ ನೀಡಿ, 24 ಗಂಟೆಯೊಳಗಾಗಿ ಉತ್ತರ ನೀಡುವಂತೆ ಸೂಚಿಸಿತ್ತು. 

ಕೂಡಲೇ ಪ್ರತಿಕ್ರಿಯಿಸಿದ ಹಾರ್ದಿಕ್‌ ಪಾಂಡ್ಯ, ತಾನು ಉದ್ದೇಶಪೂರ್ವಕವಾಗಿ ಹಾಗೆ ಮಾಡಿಲ್ಲ. ಯಾರನ್ನೂ ನೋಯಿಸುವ ಉದ್ದೇಶ ತನಗಿರಲಿಲ್ಲ. ಆ ಶೋ ಇದ್ದಿದ್ದೆ ಹಾಗೆ. ಅದಕ್ಕೆ ತಕ್ಕಂತೆ ನಾನು ಮುಂದುವರಿದೆ ಅಷ್ಟೇ ಎಂದಿದ್ದರು. ಈ ವಿವರಣೆ ತನಗೆ ತೃಪ್ತಿ ತಂದಿಲ್ಲ ಎಂದು ಬಿಸಿಸಿಐ ಹೇಳಿದೆ. 

ಆದರೆ ಇದುವರೆಗೆ ಕೆ.ಎಲ್‌.ರಾಹುಲ್‌ ಏನು ಪ್ರತಿಕ್ರಿಯೆ ನೀಡಿದ್ದಾರೆಂದು ಗೊತ್ತಾಗಿಲ್ಲ.

Advertisement

ಡಯಾನ ಅಭಿಪ್ರಾಯದ ಬಳಿಕೆ ನಿರ್ಧಾರ: ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಹೊಸ ತರಬೇತುದಾರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಡಯಾನ ಎಡುಲ್ಜಿಯಿಂದ‌ ವಿರೋಧ ಎದುರಿಸಿದ್ದ ವಿನೋದ್‌ ರಾಯ್‌, ಪ್ರಸ್ತುತ ಪ್ರಕರಣದಲ್ಲಿ ಜಾಣ್ಮೆಯ ಹೆಜ್ಜೆಯಿಡಲು ನಿರ್ಧರಿಸಿದಂತಿದೆ. 2 ಪಂದ್ಯಗಳ ನಿಷೇಧಕ್ಕೆ ವಿನೋದ್‌ ಮನಸ್ಸು ಮಾಡಿದ್ದರೂ, ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂದು ತಿಳಿಯಲು ಡಯಾನ ನಿರ್ಧರಿಸಿದ್ದಾರೆ. ಆದ್ದರಿಂದ ಅವರ ಅಭಿಪ್ರಾಯ ಪಡೆದು ಮುಂದುವರಿಯುವುದಾಗಿ ವಿನೋದ್‌ ಹೇಳಿದ್ದಾರೆ.

ಆಸೀಸ್‌ ವಿರುದ್ಧ 2 ಏಕದಿನಕ್ಕೆ ಅಲಭ್ಯ?
ಒಂದು ವೇಳೆ ಇಬ್ಬರೂ ನಿಷೇಧಕ್ಕೊಳಗಾದರೆ ಆಸ್ಟ್ರೇಲಿಯ ವಿರುದ್ಧ ಜ.12ರಿಂದ ಆರಂಭವಾಗುವ 3 ಪಂದ್ಯಗಳ ಏಕದಿನ ಸರಣಿಯ, ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಅದು ಮುಂದಿನ ಏಕದಿನ ವಿಶ್ವಕಪ್‌ ಹಿನ್ನೆಲೆಯಲ್ಲಿ ಇಬ್ಬರ ಪಾಲಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next