ಬಾಗಲಕೋಟೆ: ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆಯ ನಾಗರಿಕರು ಕೂಡ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಆ. 11ರಿಂದ 17ರವರೆಗೆ ದೇಶದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸಿ ದೇಶದ ಜನತೆ ತಮ್ಮ ರಾಷ್ಟ್ರಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರಕಾರದ ಸರಕಾರಿ, ಅರೆ ಸರಕಾರಿ, ನಿಗಮ ಮಂಡಳಿ, ಶಾಲಾ ಕಾಲೇಜು ಸೇರಿದಂತೆ ಸಾರ್ವಜನಿಕರು ಕೂಡ ತಮ್ಮ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ನಾಗರಿಕರು ಸ್ವಯಂಪ್ರೇರಿತರಾಗಿ ಭಾಗವಹಿಸುವ ಮೂಲಕ ತಮ್ಮ ರಾಷ್ಟ್ರಪ್ರೇಮ ಮೆರೆಯಬಹುದಾಗಿದೆ ಎಂದರು.
ಗೃಹ ವ್ಯವಹಾರಗಳ ಮಂತ್ರಾಲಯ ದ್ವಜ ಸಂಹಿತೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕೈಯಲ್ಲಿ ತಯಾರಿಸಿದ ಅಥವಾ ಯಂತ್ರದಿಂದ ತಯಾರಿಸಿದಂತಹ ಪಾಲಿಸ್ಟರ್ ಹತ್ತಿ ಉಣ್ಣೆ, ರೇಷ್ಮೆ, ಖಾದಿಯಿಂದ ತಯಾರಿಸಿದ ರಾಷ್ಟ್ರ ಧ್ವಜ ಹಾರಿಸಬಹುದಾಗಿದೆ. ಧ್ವಜದ ಅಳತೆಯು 20×30 ಅಥವಾ ಈ ಅಳತೆಯ ಅರ್ಧದಷ್ಟು ಆಗಿರುವಂತಹ ಧ್ವಜ ಆರಿಸಬಹುದೆಂದು ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿದ್ದು, ಧ್ವಜದ ಘನತೆಗೆ ಧಕ್ಕೆ ಆಗದಂತೆ ನಾಗರಿಕರು ಎಚ್ಚರಿಕೆ ವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರಧ್ವಜಗಳ ಹಂಚಿಕೆ ಮತ್ತು ಮಾರಾಟ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು, ಮತ್ತು ನಗರ ಪ್ರದೇಶಗಳಲ್ಲಿ ನಗರ ಸ್ಥಳಿಯ ಸಂಸ್ಥೆಗಳನ್ನು ಗುರುತಿಸಿ, ಜವಾಬ್ದಾರಿಯುತ ವ್ಯಕ್ತಿಗಳಿಗೆ ಈ ಅಭಿಯಾನದ ನೇತೃತ್ವ ವಹಿಸಿಕೊಟ್ಟು ಎಲ್ಲೂ ಆಚಾತುರ್ಯ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಂಡು ಯಶಸ್ವಿಗೊಳಿಸಬೇಕು ಎಂದರು.
ಸಿಇಒ ಟಿ. ಭೂಬಾಲನ್, ಎಸ್ಪಿ ಜಯಪ್ರಕಾಶ ಅಕ್ಕರಕಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕಿರಣಕುಮಾರ ಮುಂತಾದವರು ಉಪಸ್ಥಿತರಿದ್ದರು.