Advertisement

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

07:27 PM Jul 03, 2020 | Hari Prasad |

ಉಳ್ಳಾಲ: ಮಂಗಳೂರು ತಾಲೂಕಿನ ಹರೇಕಳ ಗ್ರಾಮದಲ್ಲಿ ಐದು ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜು. 6ರಿಂದ ಹತ್ತು ದಿನಗಳ ಕಾಲ ಗ್ರಾಮವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲು ಶುಕ್ರವಾರ ಪಂಚಾಯತ್‌ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದಾರೆ.

Advertisement

ಹರೇಕಳ ಉಳಿದೊಟ್ಟು ನಿವಾಸಿ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಕೋವಿಡ್ 19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಲ ಮಾರ್ಗದ ಜತೆ ಬಸ್‌ಗಳ ಸಂಚಾರ ಸಂಪೂರ್ಣ ಬಂದ್‌ ಮಾಡಲಾಗಿದೆ.

ಹೊರಗಿನ ಖಾಸಗಿ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಅತ್ಯಗತ್ಯ ಕೆಲಸಕಾರ್ಯಗಳಿಗೆ ಹೊರಗೆ ಹೋಗುವವರು ಸೂಕ್ತ ತಪಾಸಣೆ ನಡೆಸಿ, ಕೆಲಸಕ್ಕೆ ಹೋಗುವ ಬಗ್ಗೆ ಕಾರಣ ನೀಡಬೇಕು.

ನಮ್ಮ ಆರೋಗ್ಯ ನಾವೇ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಈ ಮೂಲಕ ಹರೇಕಳ ಗ್ರಾಮ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಲ್ಲ ಮನೆಯವರು ಸಹಕಾರ ನೀಡಬೇಕು ಎಂದರು.

ಪಂ. ಅಧ್ಯಕ್ಷೆ ಅನಿತಾ ಡಿ’ಸೋಜಾ ಮಾತನಾಡಿ, ಗ್ರಾಮದಲ್ಲಿರುವ ಎಲ್ಲ ಅಂಗಡಿಗಳು 12 ಗಂಟೆಗೆ ಬಂದ್‌ ಮಾಡಲಾಗುತ್ತಿದ್ದು, ಹೊಟೇಲುಗಳನ್ನು ಸಂಪೂರ್ಣ ಬಂದ್‌ ಮಾಡಲಾಗುತ್ತಿದೆ. ವಯಸ್ಕರು, ಮಕ್ಕಳು ಮನೆಯಿಂದ ಹೊರಬರಬಾರದು.

Advertisement

ಶನಿವಾರದಿಂದ ಎಲ್ಲ ಮನೆಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಲಾಗುವುದು ಮತ್ತು ಈ ನಿರ್ಣಯವನ್ನು ಧಾರ್ಮಿಕ, ರಾಜಕೀಯ, ಸರ್ವಪಕ್ಷ ಮುಖಂಡರ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪಂಚಾಯತ್‌ ಉಪಾಧ್ಯಕ್ಷ ಮಹಾಬಲ ಹೆಗ್ಡೆ ಮಾತನಾಡಿ, ಎಲ್ಲ ಧರ್ಮದ ಜನರು ಒಂದಾಗಿ ಲಾಕ್‌ಡೌನ್‌ಗೆ ಬೆಂಬಲ ನೀಡಿದ್ದು, ಎಲ್ಲರ ಸಹಕಾರ ನೀಡಬೇಕು ಎಂದರು.

ವಾರಿಯರ್ಸ್‌ ತಂಡ ರಚನೆ
ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಮಲಾರ್‌ ಮಾತನಾಡಿ, 40 ಜನ ವಾರಿಯರ್ಸ್‌ ತಂಡ ರಚನೆ ಮಾಡಲಾಗಿದ್ದು, ಗಡಿ ಪ್ರದೇಶ ಗುರುತಿಸಿ ಅಲ್ಲಿ ತಂಡ ಕಾರ್ಯ ನಿರ್ವಹಿಸಲಿದೆ. ಅತ್ಯಗತ್ಯ ಇರುವವರು ಸಕಾರಣ ನೀಡಿ ಹೊರ ಹೋಗುವ ಮತ್ತು ಒಳಬರುವ ಅವಕಾಶ ನೀಡಲಾಗುವುದು ಎಂದರು.

ತ್ಯಾಜ್ಯ ನಿರ್ಮೂಲನೆ
ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು ಮಾತನಾಡಿ, ಗ್ರಾಮದಲ್ಲಿ ಸ್ಯಾನಿಟೈಸೇಶನ್‌ ಮಾಡುವ ಮೊದಲು ರಸ್ತೆಬದಿ ಬಿದ್ದಿರುವ ತ್ಯಾಜ್ಯ ನಿರ್ಮೂಲನೆಗೆ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಕೋವಿಡ್‌ ನಿರ್ವಹಣೆಗೆ ಅನುದಾನ ಬಳಸುವ ಅವಕಾಶ ಸರಕಾರ, ಪಂಚಾಯತ್‌ಗಳಿಗೆ ನೀಡಿದೆ ಎಂದರು.

ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ಸದಸ್ಯರಾದ ಬದ್ರುದ್ದೀನ್‌ ಫರೀದ್‌ ನಗರ, ಮೋಹನ್‌ ದಾಸ್‌ ಶೆಟ್ಟಿ ಉಳಿದೊಟ್ಟು, ಬಶೀರ್‌ ಉಂಬುದ, ಎಂ.ಪಿ. ಮಜೀದ್‌, ಮುಖಂಡರಾದ ಬಶೀರ್‌, ವಾಮನ್‌ರಾಜ್‌ ಪಾವೂರು, ಇಮ್ತಿಯಾಝ್, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next