Advertisement

ಚಿಕಿತ್ಸೆಗೆ ಅಲೆದಾಡಬೇಕಾದ ಸಂಕಷ್ಟ ; ಪಾಳುಬಿದ್ದ ಉಪಕೇಂದ್ರ

11:56 PM Mar 03, 2021 | Team Udayavani |

ಕಾರ್ಕಳ: ಊರಿನಲ್ಲಿ ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡರೆ ಚಿಕಿತ್ಸೆಗಾಗಿ ಅಲೆದಾಡಬೇಕು. ತತ್‌ಕ್ಷಣದಲ್ಲಿ ಹತ್ತಿರದಲ್ಲಿ ಚಿಕಿತ್ಸೆ ಲಭ್ಯವಿಲ್ಲ. ಬೇರೆ ಕಡೆ ಹೋಗೋಣ ಎಂದರೆ ಬಸ್‌ ಸೌಲಭ್ಯವೂ ಇಲ್ಲ.

Advertisement

ಇದು ಕಾರ್ಕಳ ತಾಲೂಕು, ಈದು ಗ್ರಾಮದ ಸ್ಥಿತಿ. ಸ್ಥಳೀಯರಿಗೆ ಉಪಯೋಗವಾಗುವಂತೆ ಇಲ್ಲಿ ಆರೋಗ್ಯ ಉಪಕೇಂದ್ರವನ್ನು ತೆರೆಯಲಾಗಿತ್ತು, ಆದರೆ ಕೆಲವು ಸಮಯ ಸೇವೆ ನೀಡಿ ಇದೀಗ ಮುಚ್ಚಿದೆ. ಇದರಿಂದಾಗಿ ಪಲ್ಕೆ ಭಾಗದ ನಾಗರಿಕರೂ ಚಿಕಿತ್ಸೆಗಾಗಿ ಅಲೆದಾಡುವ ದುಃಸ್ಥಿತಿ ಇದೆ.

ಉಪಕೇಂದ್ರ ಉಪಯೋಗಕ್ಕಿಲ್ಲ!
ಲಕ್ಷಾಂತರ ರೂ. ವ್ಯಯಿಸಿ ಸರಕಾರ ಕಟ್ಟಡ, ಸಲಕರಣೆ, ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದ್ದರೂ ಇಲಾಖೆ ಆಸಕ್ತಿ ತೋರಿಲ್ಲ. ಪಲ್ಕೆಯ ಈದು “ಬಿ’ ಆರೋಗ್ಯ ಉಪಕೇಂದ್ರ 4 ವರ್ಷಗಳಿಂದಲೂ ಮುಚ್ಚಿಯೇ ಇದೆ. ಬಾಗಿಲು ತೆರೆಯದೇ ಇದ್ದ ಕಾರಣಕ್ಕೆ ಉಪಕೇಂದ್ರ ಪಾಳು ಬಿದ್ದಿದೆ. ಹಾವು, ಇಲಿ-ಹೆಗ್ಗಣಗಳ ಸ್ಥಳವಾಗಿದೆ. ಕಟ್ಟಡ ಸುತ್ತ ಗಿಡಗಂಟಿಗಳು ಬೆಳೆದಿವೆ.

ಆರಂಭದಲ್ಲಿ ಸೇವೆ ಚೆನ್ನಾಗಿತ್ತು
2012ರಲ್ಲಿ ಈ ಭಾಗದ ಜನರ ಆರೋಗ್ಯ ಸಮಸ್ಯೆ ನಿವಾರಣೆಯ ಉದ್ದೇಶದಿಂದ ಉಪಕೇಂದ್ರ ಆರಂಭಿಸಲಾಗಿತ್ತು. ಆರಂಭದ ದಿನಗಳಲ್ಲಿ ಉತ್ತಮ ಸೇವೆಯೂ ದೊರಕುತಿತ್ತು. ಅನಂತರದಲ್ಲಿ ಗ್ರಹಣ ಹಿಡಿದಿದೆ.

ತುರ್ತು ಚಿಕಿತ್ಸೆಗೆ ಈ ಭಾಗದ ಜನರು ಐದು ಕಿ.ಮೀ. ದೂರದ ಹೊಸ್ಮಾರಿಗೆ ಬರಬೇಕು. ಅಲ್ಲಿ ಲಭ್ಯವಿಲ್ಲದಿದ್ದರೆ 17 ಕಿ.ಮೀ. ದೂರದ ಬಜಗೋಳಿಗೆ ಅಥವಾ 27 ಕಿ.ಮೀ. ದೂರದ ತಾಲೂಕು ಆಸ್ಪತ್ರೆಗೆ ಬರಬೇಕಿದೆ.

Advertisement

ಬಸ್‌ಗಾಗಿ ಬೇಡುವ ಕುಗ್ರಾಮ
ಈದು ಗ್ರಾಮದ ಕೆಲ ಭಾಗಗಳು ನಕ್ಸಲ್‌ ಬಾಧಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿವೆ. ಕುಗ್ರಾಮದ ಈ ಭಾಗದಲ್ಲಿ ಸಂಚಾರ ವ್ಯವಸ್ಥೆಗಳಿಗೆ ಬಸ್‌ ಸೌಲಭ್ಯವೂ ಇಲ್ಲ. ಇದರಿಂದ ಬಾಡಿಗೆ ವಾಹನಗಳನ್ನೇ ಆಶ್ರಯಿಸಬೇಕಾಗಿದೆ. ಕೆಲವೊಂದು ಸಂದರ್ಭ ವಾಹನಗಳು ಸಿಗದೆ ರೋಗಿಗಳನ್ನು ಅರ್ಧ ದಾರಿಯವರೆಗೆ ಹೊತ್ತು ತಂದು ಆಸ್ಪತ್ರೆ ಸೇರಿಸಿರುವ ಉದಾಹರಣೆಗಳೂ ಇವೆ.

ಆರೋಗ್ಯ ಇಲಾಖೆ ಕಣ್ತೆರೆಯಲಿ!
ಕುಗ್ರಾಮ ಪ್ರದೇಶದಲ್ಲಿ ಆಸ್ಪತ್ರೆ ಮುಚ್ಚಿರುವುದರಿಂದ ಜನರ ಸೇವೆಗೆ ಅಡಚಣೆಯಾಗು ತ್ತಿದೆ. ಕೊರೊನಾ ವ್ಯಾಪಿಸಿದಾಗಲೂ ಇದು ಮುಚ್ಚಿಯೇ ಇತ್ತು. ಇಲ್ಲಿನ ಸೇವೆ ಮತ್ತೆ ಲಭ್ಯವಾಗಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ಕಾಳಜಿ ವಹಿಸಬೇಕು. ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಆರೋಗ್ಯ ಸಚಿವರು, ಪ್ರಧಾನಿ ಗಳಿಗೆ ಪತ್ರ ಬರೆಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಉಪ ಕೇಂದ್ರದ ಸೇವೆ ಸಿಗುವಂತೆ ಕ್ರಮ
ಈದು “ಬಿ’ ಆರೋಗ್ಯ ಉಪಕೇಂದ್ರ ಸಾರ್ವಜನಿಕರ ಸೇವೆಗೆ ಸಿಗುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುವುದು. ಉಪಕೇಂದ್ರದ ಸೇವೆ ಸಿಗುವಂತೆ ಕ್ರಮವಹಿಸಲಾಗುವುದು.

– ಡಾ| ಕೃಷ್ಣಾನಂದ ಶೆಟ್ಟಿ , ತಾಲೂಕು ಆರೋಗ್ಯಾಧಿಕಾರಿ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next