ನವದೆಹಲಿ: ಕಾಫಿ ವಿತ್ ಕರಣ್ ಟೀವಿ ಶೋನಲ್ಲಿ ಭಾಗವಹಿಸಿ ಮಹಿಳೆಯರ ವಿರುದ್ಧ ಅಸಭ್ಯ ಮಾತುಗಳನ್ನಾಡಿದ್ದಾರೆಂಬ ಕಾರಣಕ್ಕೆ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್‌ಗೆ ಬಿಸಿಸಿಐ ಕಠಿಣ ಕ್ರಮವಾಗಿ ತಲಾ 2 ಏಕದಿನ ಪಂದ್ಯಗಳಿಗೆ ಆಡಲು ನಿಷೇಧ ಹೇರುವ ಸಾಧ್ಯತೆಗಳಿವೆ.
ಬಿಸಿಸಿಐನ ನಿರ್ವಾಹಕ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಅವರು ಇಬ್ಬರಿಗೂ ತಲಾ 2 ಪಂದ್ಯಗಳಿಗೆ ನಿಷೇಧ ಹೇರಲು ಶಿಫಾರಸು ಮಾಡಿದ್ದಾರೆ.ಇದರಿಂದಾಗಿ ಇಬ್ಬರಿಗೂ ಸಂಕಷ್ಟ ಎದುರಾಗಿದೆ.
ಶೋನ ಬಳಿಕ ಇಬ್ಬರು ಆಟಗಾರರು ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಈ ಕಾರಣಕ್ಕಾಗಿ , ಬಿಸಿಸಿಐ ಇಬ್ಬರಿಗೂ ಕಾರಣ ಕೇಳಿ ಬುಧವಾರ ನೋಟಿಸ್ ಜಾರಿ ಮಾಡಿತ್ತು ಮತ್ತು 24 ಗಂಟೆಯೊಳಗಾಗಿ ಉತ್ತರಿಸಬೇಕೆಂದು ಆದೇಶಿಸಿತ್ತು.
ತನಗೆ ಹಲವು ಮಹಿಳೆಯರೊಂದಿಗೆ ಸಂಬಂಧವಿದೆ, ಇದನ್ನೆಲ್ಲ ಅಪ್ಪ ಅಮ್ಮನಿಗೆ ಹೇಳಿಯೇ ಮಾಡುತ್ತೇನೆಂದೂ ಹೇಳಿಕೊಂಡಿರುವ ಹಾರ್ದಿಕ್, ಸಂದರ್ಶಕ ಕರಣ್ ಕೇಳಿದ ಇನ್ನೊಂದು ಪ್ರಶ್ನೆಗೂ ಲೀಲಾಜಾಲವಾಗಿ ಉತ್ತರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ಕ್ಲಬ್‌ಗಳಲ್ಲಿ ನೀವೇಕೆ ಮಹಿಳೆಯರ ಹೆಸರನ್ನು ಕೇಳುವುದಿಲ್ಲ ಎಂಬ ಪ್ರಶ್ನೆಗೆ, ಮಹಿಳೆಯರು ಹೇಗೆ ಮುಂದುವರಿಯುತ್ತಾರೆಂದು ನೋಡುವ ಆಸೆ ನನಗೆ. ನಾನು ಸ್ವಲ್ಪ ಹಿನ್ನೆಲೆ ಯಲ್ಲಿದ್ದುಕೊಂಡು ಅವರು ಹೇಗೆ ಹೆಜ್ಜೆ ಇಡುತ್ತಾರೆಂದು ನೋಡಬೇಕೆನಿಸುತ್ತದೆ ಎಂದಿದ್ದರು. ಅಲ್ಲದೇ ಸಚಿನ್ ತೆಂಡುಲ್ಕರ್ ಗಿಂತ ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದಿರುವುದೂ ಭಾರೀ ವಿವಾದ ಸೃಷ್ಟಿಸಿದೆ.
ಪಾಂಡ್ಯ ಕ್ಷಮೆ
ವಿವಾದದ ಬಳಿಕ ಹಾರ್ದಿಕ್ ಪಾಂಡ್ಯ ಕ್ಷಮೆ ಕೇಳಿದ್ದಾರೆ. ತನಗೆ ಯಾರದೇ ಭಾವನೆ ನೋಯಿಸುವ ಉದ್ದೇಶವಿರಲಿಲ್ಲ. ಆ ಶೋ ಇದ್ದಿದ್ದೇ ಹಾಗೆ. ಅದಕ್ಕೆ ತಕ್ಕಂತೆ ತಾನು ಪ್ರತಿಕ್ರಿಯೆ ನೀಡಿದೆ ಅಷ್ಟೇ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.