ದುಬೈ: ಐಸಿಸಿ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ಟೀಂ ಇಂಡಿಯಾ ಕಿವೀಸ್ ವಿರುದ್ದದ ಹಣಾಹಣಿಗೆ ಸಜ್ಜಾಗಿದೆ. ನ್ಯೂಜಿಲ್ಯಾಂಡ್ ತಂಡ ಕೂಡಾ ಒಂದು ಪಂದ್ಯದಲ್ಲಿ ಸೋಲನುಭವಿಸಿದ್ದು, ಮೊದಲ ಜಯದ ಹುಡುಕಾಟದಲ್ಲಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ ಸದ್ಯ ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿರುವುದು ಟೀಂ ಇಂಡಿಯಾ ಅಭಿಮಾನಿಗಳಿಗೆ ಸಮಾಧಾನ ತಂದಿದೆ.
ಗಾಯದ ಸಮಸ್ಯೆಯ ಕಾರಣ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿರಲಿಲ್ಲ. ಐಪಿಎಲ್ ನಲ್ಲೂ ಬೌಲಿಂಗ್ ಮಾಡದ ಹಾರ್ದಿಕ್, ಬ್ಯಾಟ್ಸಮನ್ ರೂಪದಲ್ಲೇ ಆಡುತ್ತಿದ್ದರು. ವಿಶ್ವಕಪ್ ನ ಅಭ್ಯಾಸ ಪಂದ್ಯದಲ್ಲೂ ಬೌಲಿಂಗ್ ಮಾಡಿರಲಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲೂ ಕೇವಲ ಬ್ಯಾಟ್ಸಮನ್ ರೂಪದಲ್ಲೇ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದ ಹಾರ್ದಿಕ್ ನಂತರ ಫೀಲ್ಡಿಂಗ್ ಮಾಡಿರಲಿಲ್ಲ.
ಇದನ್ನೂ ಓದಿ:‘ಜನಾಂಗೀಯವಾದಿಯಲ್ಲ’: ಕ್ಷಮೆ ಕೇಳಿದ ಕ್ವಿಂಟನ್ ಡಿ ಕಾಕ್, ಪ್ರಕರಣ ಸುಖಾಂತ್ಯ
ಆದರೆ ಇಂದು ನೆಟ್ಸ್ ನಲ್ಲಿ ಅಭ್ಯಾಸ ಮಾಡುವ ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ಗೆ ನೆಟ್ಸ್ ನಲ್ಲಿ ಸುಮಾರು 20 ನಿಮಿಷ ಹಾರ್ದಿಕ್ ಬೌಲಿಂಗ್ ಮಾಡಿದ್ದಾರೆ. ಕೋಚ್ ರವಿ ಶಾಸ್ತ್ರಿ ಮತ್ತು ಮೆಂಟರ್ ಮಹೇಂದ್ರ ಸಿಂಗ್ ಧೋನಿ ಅವರು ಹಾರ್ದಿಕ್ ರ ಬೌಲಿಂಗ್ ನ್ನು ಸಮೀಪದಿಂದ ಗಮನಿಸಿದ್ದಾರೆ ಎಂದು ವರದಿಯಾಗಿದೆ.
ರವಿವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟಿ20 ಪಂದ್ಯ ನಡೆಯಲಿದೆ.