ಹೊಸದಿಲ್ಲಿ:ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್‌ನಲ್ಲಿ ಭಾಗವಹಿಸಿ ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕೆ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯಾ ಮತ್ತು ಕೆ.ಎಲ್.ರಾಹುಲ್ ಅವರ ಮೇಲೆ ಹೇರಲಾಗಿದ್ದ ನಿಷೇಧವನ್ನು ಬಿಸಿಸಿಐ ನಿರ್ವಾಹಕ ಸಮಿತಿ ಹಿಂತೆಗೆದುಕೊಂಡಿದೆ.
ಅಮಿಕಸ್ ಕ್ಯೂರಿ(ಕೋರ್ಟ್ ಸಲಹೆಗಾರ)ಪಿ.ಎಸ್.ನರಸಿಂಹ ಅವರ ಸಲಹೆ ಪಡೆದ ಬಳಿಕ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವಾಗಲೇ ನಿರ್ವಾಹಕ ಸಮಿತಿ ನಿಷೇಧವನ್ನು ಹಿಂಪಡೆದಿದೆ. ಕೋರ್ಟ್ ವಿಚಾರಣೆಯನ್ನು ತಾತ್ಕಾಲಿಕವಾಗಿ ಫೆಬ್ರವರಿ 4 ಕ್ಕೆ ನಿಗದಿ ಪಡಿಸಿದೆ.
ವಿವಾದಾತ್ಮಕ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಇಬ್ಬರು ಆಟಗಾರರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಮನೆಗೆ ವಾಪಾಸ್ ಕರೆಸಿಕೊಳ್ಳಲಾಗಿತ್ತು.
ನಿಷೇಧ ಹಿಂಪಡೆದಿರುವ ಹಿನ್ನಲೆಯಲ್ಲಿ ಪಾಂಡ್ಯಾ ಅವರು ನ್ಯೂಜಿಲ್ಯಾಂಡ್‌ಗೆ ತೆರಳಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಗಳಿವೆ. ರಾಹುಲ್ ಅವರು ದೇಶಿ ಕ್ರಿಕೆಟ್‌ನಲ್ಲಿ ಆಡುವ ಸಾಧ್ಯತೆಗಳಿವೆ.
ಇಬ್ಬರು ಕ್ರಿಕೆಟಿಗರ ಮೇಲೆ ಸಂವಿಧಾನದ ನಿಯಮ 46 ರ ಅನ್ವಯ ಕ್ರಮ ಕೈಗೊಳ್ಳಲಾಗಿತ್ತು ಎಂದು ನಿರ್ವಾಹಕ ಸಮಿತಿ ಹೇಳಿದೆ.ಆಟಗಾರರ ವರ್ತನೆ ಸಮಿತಿಗೆ ಅಸಭ್ಯ ಎಂದು ಕಂಡು ಬಂದರೆ ಈ ಕ್ರಮ ಕೈಗೊಳ್ಳಲಾಗುತ್ತದೆ.