Advertisement
ದೇಶ ರಕ್ಷಣೆಗಾಗಿ ಹಲವಾರು ಮಂದಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟರು. ತಮ್ಮ ಕುಟುಂಬ, ಬಂಧುಬಳಗ ಬಿಟ್ಟು ಹೋದರು. ಅಂತಹ ಸಾಧಕರ ಹೆಸರಿನಲ್ಲಿ ಕೇಳಿ ಬರುವ ಪ್ರಮುಖ ಹೆಸರು ಬಾಲಗಂಗಾಧರ ತಿಲಕ್. ದೇಶ ಕಂಡ ಅಪ್ರತಿಮ ರಾಷ್ಟ್ರೀಯವಾದಿ, ಸಮಾಜ ಸುಧಾರಕ, ಹಿಂದೂ ರಾಷ್ಟ್ರೀಯ ಪಿತಾಮಹರೆಂದೇ ಕರೆಯಲ್ಪಡುವ ಇವರು ಪ್ರತಿಯೊಬ್ಬರ ಬದುಕಿಗೂ ಬೇಕಾದ ಅಮೂಲ್ಯ ವಿಚಾರಗಳನ್ನು ನೀಡಿದ್ದಾರೆ. ದೇಶ ಸೇವೆಯೇ ಧ್ಯೇಯ ಸ್ವಾತಂತ್ರ್ಯ ಪೂರ್ವದಲ್ಲಿ ಘರ್ಜಿಸಿದ ಈ ಮಾತು ಇಂದಿಗೂ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದುಕೊಂಡಿದೆ. ದೇಶ ಸೇವೆಯನ್ನೇ ತಮ್ಮ ಪ್ರಮುಖ ಉದ್ದೇಶವನ್ನಾಗಿ ಮಾಡಿಕೊಂಡ ಇವರು ಇಂದಿನ ಯುವ ನಾಯಕರಿಗೆ ಮಾದರಿಯಾಗಿದ್ದಾರೆ. ಯಾವುದೇ ಕರ್ತವ್ಯ, ಜವಾಬ್ದಾರಿಗಳನ್ನು ಸ್ವಹಿತದ ದೃಷ್ಟಿಯಿಂದ ನೋಡದೆ, ದೇಶದ ಒಳಿತಿಗಾಗಿ ಹಗಲು, ರಾತ್ರಿ ದುಡಿದು ಎಲ್ಲರ ಹೃದಯದಲ್ಲೂ ಇಂದು ಅಗ್ರ ಮಾನ್ಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
Related Articles
Advertisement
ಶಿಕ್ಷಣದಿಂದ ಪ್ರಗತಿಶಿಕ್ಷಣ ಪಡೆದರೆ ಮಾತ್ರ ನಾವು ಪ್ರಗತಿಯ ದಾರಿಯಲ್ಲಿ ಸಾಗಬಹುದು. ಶಿಕ್ಷಣ ನಮ್ಮ ಭವಿಷ್ಯಕ್ಕೆ ಮಾತ್ರವಲ್ಲ ದೇಶದ ಪ್ರಗತಿಗೂ ಅಗತ್ಯ . ನಾವು ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು. ಪ್ರತಿಯೊಬ್ಬರೂ ತಮ್ಮ ಸ್ವಂತ ಹಿತದೃಷ್ಟಿಯಿಂದ ದೇಶದ ಪ್ರಗತಿ ಕಾಣಬೇಕು. ಇದರಿಂದ ಒಗ್ಗಟ್ಟು ಸಾಧ್ಯವಾಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಅಸ್ಪ್ರಶ್ಯತೆ ನಿವಾರಣೆ ಶ್ರೇಷ್ಠ ಕಾರ್ಯ
ಅಸ್ಪ್ರಶ್ಯತೆ ನಿವಾರಣೆಗೆ ನಮ್ಮ ದೇಶದಲ್ಲಿ ಅನೇಕ ಸಮಾಜ ಸುಧಾರಕರು ಪ್ರಯತ್ನಿಸಿದ್ದಾರೆ. ಅವರಲ್ಲಿ ತಿಲಕ್ ಕೂಡ ಒಬ್ಬರು. ‘ಅಸ್ಪ್ರಶ್ಯತೆಯನ್ನು ದೇವರು ಬಂದು ಪ್ರತಿಪಾದಿಸಿದರೂ ನಾನು ಆ ದೇವರನ್ನು ದೇವರೆಂದು ಪೂಜಿಸಲಾರೆ’ ಎನ್ನುವ ಮೂಲಕ ಬಾಲಗಂಗಾಧರ ತಿಲಕ್ ಅಸ್ಪ್ರಶ್ಯತೆಯನ್ನು ತೀವ್ರವಾಗಿ ವಿರೋಧಿಸಿದರು ಮಾತ್ರವಲ್ಲದೇ ಹಿಂದೂ ಧರ್ಮ ಸುಧಾರಣೆ ಮತ್ತು ಧರ್ಮ ರಕ್ಷಣೆಗಾಗಿ ಅಸ್ಪೃಶ್ಯತೆ ನಿವಾರಿಸುವುದು ಶ್ರೇಷ್ಠ ಕಾರ್ಯ ಎಂಬುವುದು ಅವರ ವಾದವಾಗಿತ್ತು. ಸವಾಲುಗಳನ್ನು ಸ್ವೀಕರಿಸಿ
ಜೀವನದಲ್ಲಿ ಸೋಲು ಗೆಲುವು ಖಚಿತ. ಪ್ರತೀ ದಿನ, ಪ್ರತೀ ಸಮಯ ಸವಾಲುಗಳು ನಮ್ಮನ್ನು ಇನ್ನಷ್ಟು ಕಠಿನ ಪರಿಶ್ರಮಕ್ಕೆ ದೂಡುತ್ತದೆ. ಇದರಿಂದ ಹೊಸ ಪಾಠ ಕಲಿಯುತ್ತೇವೆ. ಒಂದಿಷ್ಟು ಜಾಗೃತರಾಗಿಯೂ ಇರುತ್ತೇವೆ. ಆದರೆ, ಸಾಧನೆಗೆ ಪೂರಕವಾಗುವ ಚಾತುರ್ಯತೆ ಬೆಳೆಸಿಕೊಳ್ಳಬೇಕಾಗಿದೆ. ಬಹುಮುಖ್ಯವಾಗಿ, ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ತಿಳಿದುಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದ ಬಾಲಗಂಗಾಧರ್ ತಿಲಕ್ ಇದನ್ನು ತಮ್ಮ ಜೀವನ ಮೂಲಕವೇ ತೋರಿಸಿಕೊಟ್ಟರು. ಇಚ್ಛಾಶಕ್ತಿಯ ಕೊರತೆ ನೀಗಿಸಿಕೊಳ್ಳಿ
ಬದುಕಿನಲ್ಲಿ ಸಮಸ್ಯೆ ಸಾಮಾನ್ಯ. ಸಮಸ್ಯೆಯ ಮೂಲ ಹುಡುಕಲು ಕಲಿಕೆ ಬೇಕಿಲ್ಲ. ಬದಲಾಗಿ ಸಮಸ್ಯೆಯನ್ನು ನಿವಾರಿಸಲು ಹೋರಾಡುವುದಕ್ಕೆ ಮಾನಸಿಕ ಸದೃಢತೆ ಬೇಕು. ಅದಕ್ಕಾಗಿ ಇಚ್ಛಾ ಶಕ್ತಿಯ ಕೊರತೆ ನೀಗಿಸಿಕೊಳ್ಳಬೇಕು. ಸ್ವಇಚ್ಛೆಯಿದ್ದರೆ ಮಾತ್ರ ಕೆಲಸ ಕಾರ್ಯಗಳು ಸುಲಭವಾಗುತ್ತವೆ. ಈಗಿನ ಯುವ ಪೀಳಿಗೆ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಇಚ್ಛಾ ಶಕ್ತಿಯ ಕೊರತೆಯೂ ಒಂದು. ಅದ್ದರಿಂದ ಇಚ್ಛಾ ಶಕ್ತಿಯ ಕೊರತೆಯನ್ನು ನೀಗಿಸಿಕೊಂಡರೆ ಬದುಕಿನಲ್ಲಿ ಎಂತಹ ಸವಾಲು ಬೇಕಿದ್ದರೂ ಎದುರಿಸಬಹುದು ಎಂಬ ಬಾಲಗಂಗಾಧರ ತಿಲಕರ ಮಾತುಗಳು ಇಂದಿಗೂ ಅರ್ಥಪೂರ್ಣ ಎಂದೆನಿಸುತ್ತದೆ. ಯಶಸ್ಸಿಗೆ ಶತ್ರುಗಳಿರಬೇಕು
ಮನೆಮಂದಿ, ಸ್ನೇಹಿತರು, ಬಂಧುಬಳಗದ ವರು ನಾವು ಕಷ್ಟ ದಲ್ಲಿದ್ದಾಗ ಅಥವಾ ಸುಖಿಯಾಗಿದ್ದಾಗ ಸಹಾಯ ಹಸ್ತ ಮಾಡುತ್ತಾರೆ. ಸಾಧನೆಯ ಶಿಖರವೇರಲು ಮೆಟ್ಟಿಲುಗಳಾಗುತ್ತಾರೆ. ಆದರೆ ಶತ್ರುಗಳು ಹೆಚ್ಚಾದರೆ ನಿಮ್ಮ ಸಾಧನೆಯ ಫಲ ಗೋಚರಿಸುತ್ತದೆ ಎನ್ನುವ ಬಾಲ ಗಂಗಾಧರ್ ತಿಲಕ್ ಅವರ ಮಾತುಗಳು, ಬದುಕಿನಲ್ಲಿ ಶತ್ರುಗಳು ನಮ್ಮನ್ನು ಉನ್ನತಿಯೆಡೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುವ ಅರ್ಥವೂ ಅಡಗಿದೆ. ಶ್ರುತಿ ನೀರಾಯ