Advertisement

ಅತಿವೃಷ್ಟಿಯ ಕತ್ತಲು ಓಡಿಸಿದ ಮೆಸ್ಕಾಂ!

02:58 PM Aug 20, 2019 | Suhan S |

ಶಿವಮೊಗ್ಗ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಕಳೆದ 12 ದಿನಗಳಿಂದ ಕತ್ತಲಲ್ಲಿ ಮುಳುಗಿದ್ದ ನೂರಾರು ಹಳ್ಳಿಗಳು ಮತ್ತೆ ಬೆಳಕು ಕಾಣುತ್ತಿವೆ. ವಿದ್ಯುತ್‌ ಸಂಪರ್ಕ ಕಡಿತಗೊಂಡು ಹೈರಾಣಾಗಿದ್ದ ನೂರಾರು ಹಳ್ಳಿಗಳಿಗೆ ಮೆಸ್ಕಾಂನ ಅವಿರತ ಶ್ರಮದಿಂದ ಮತ್ತೆ ‘ಪವರ್‌’ ಸಿಕ್ಕಿದೆ.

Advertisement

ಆಗಸ್ಟ್‌ 3ರಿಂದ 12ರವರೆಗೆ ಸುರಿದ ಭಾರಿ ಮಳೆಯಿಂದ ಇಡೀ ಜಿಲ್ಲೆ ಅಸ್ತವ್ಯಸ್ತಗೊಂಡಿತ್ತು. ರಸ್ತೆ, ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಜನ ಮೊಬೈಲ್ನಲ್ಲಿ ಚಾರ್ಜ್‌, ಟಿವಿ ಇಲ್ಲದೇ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದರು. ಎಡಬಿಡದೆ ಸುರಿಯುತ್ತಿದ್ದ ಮಳೆಯು ಹೊರಹೋಗಲು ಆಗದೆ, ಒಳಗೆ ಕೂರಲೂ ಆಗದಂತೆ ಮಾಡಿತ್ತು. ಮೆಸ್ಕಾಂ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ, ಕಗ್ಗತ್ತಲಲ್ಲಿ ಮುಳುಗಿದ್ದ ಗ್ರಾಮಗಳಿಗೆ ಬೆಳಕು ನೀಡಿದ್ದಾರೆ.

ಕತ್ತಲಲ್ಲಿ 720 ಗ್ರಾಮ: ನಗರ ಹಾಗೂಗ್ರಾಮಾಂತರ ಪ್ರದೇಶ ಸೇರಿ ಜಿಲ್ಲೆಯ 720 ಗ್ರಾಮಗಳು ವಿದ್ಯುತ್‌ ಸಂಪರ್ಕ ಕಳೆದುಕೊಂಡಿದ್ದವು. ಮರಗಳು ಉರುಳಿ, ಗುಡ್ಡ ಕುಸಿದು ಕಂಬಗಳು ನೆಲಕ್ಕೆ ಉರುಳಿದ್ದವು. ವಿದ್ಯುತ್‌ ಕಂಬಗಳು ಮುರಿದು ಹೋಗಿದ್ದರಿಂದ ಹೊಸ ಕಂಬ ಹಾಕುವುದು ಅನಿವಾರ್ಯವಾಗಿತ್ತು. ಕಡಿದಾದ ರಸ್ತೆ, ಹರಿಯುವ ನೀರು , ಕೆಸರು, ಗುಡ್ಡ ಕುಸಿದ ಪ್ರದೇಶಗಳಿಗೆ ಕಂಬ ಸಾಗಿಸುವುದು ಕಷ್ಟದ ಕೆಲಸವಾಗಿತ್ತು. ಕಂಬ ಸಾಗಿಸುವ ಲಾರಿಗಳು ಹೂತುಹೋಗುವ ಸಂಭವ ಹೆಚ್ಚಿದ್ದರಿಂದ ಕಾರ್ಯಾಚರಣೆಗೆ ತೀವ್ರ ತೊಡಕಾಗಿತ್ತು. ಮಳೆ ಕಡಿಮೆಯಾಗುತ್ತಿದ್ದಂತೆ ಮೆಸ್ಕಾಂ ಸಿಬ್ಬಂದಿ ಕೆಲಸ ಆರಂಭಿಸಿದರು. ಆರಂಭದಲ್ಲಿ 400 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಯಶಸ್ವಿಯಾದರು. ಹೊಸನಗರ, ತೀರ್ಥಹಳ್ಳಿ ತಾಲೂಕಿನ ಕೆಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದು ಅಸಾಧ್ಯವಾಗಿತ್ತು. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿತ್ತು. ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಎಲ್ಲ ಸವಾಲುಗಳನ್ನು ಮೀರಿ ಮೆಸ್ಕಾಂ ಆ.18ರೊಳಗೆ 714 ಗ್ರಾಮಗಳಿಗೆ ವಿದ್ಯುತ್‌ ಕೊಡಲು ಯಶಸ್ವಿಯಾಗಿದೆ. ಅತೀ ಹೆಚ್ಚು ಮಳೆ ಬೀಳುವ ಹೊಸನಗರ, ತೀರ್ಥಹಳ್ಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿತ್ತು. ಹೊಸನಗರದಲ್ಲಿ 130, ತೀರ್ಥಹಳ್ಳಿಯಲ್ಲಿ 85 ಗ್ರಾಮಗಳು ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿದ್ದವು. ಅದೇ ರೀತಿ ಶಿವಮೊಗ್ಗ 75, ಶಿಕಾರಿಪುರದ 63 ಗ್ರಾಮಗಳು ಸೇರಿ ಒಟ್ಟು 720 ಗ್ರಾಮಗಳು ಮಳೆರಾಯನ ಆರ್ಭಟಕ್ಕೆ ನಲುಗಿದ್ದವು.

 

•ಶರತ್‌ ಭದ್ರಾವತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next