ಚಡಚಣ: ಉತ್ತರ ಕರ್ನಾಟಕದ ಗಂಡು ಕಲೆ, ಬಯಲಾಟದ ಉಳುವಿಗೆ ಗಟ್ಟಿ ನಿರ್ಧಾರದ ಅವಶ್ಯಕತೆ ಇದೆ ಎಂದು ಗಡಿನಾಡ ಬಯಲಾಟ ಸಮ್ಮೇಳನದ ಸರ್ವಾಧ್ಯಕ್ಷ ಬಸಲಿಂಗಯ್ಯ ಹಿರೇಮಠ ಹೇಳಿದರು.
ಗೋಡಿಹಾಳ ಗ್ರಾಮದಲ್ಲಿ ನಡೆದ ಪ್ರಥಮ ಗಡಿನಾಡ ಬಯಲಾಟ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಹಾಗೂ ಆಸಕ್ತರ ರಾಜಾಶ್ರಯದಿಂದ ಯಕ್ಷಗಾನ ವಿಶ್ವ ಪ್ರಸಿದ್ಧಿ ಹೊಂದಿದೆ. ಆದರೆ ಅದೇ ಕಲೆಯ ಇನ್ನೊಂದು ಮುಖ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿರುವ ಬಯಲಾಟ. ಈ ಕಲೆಗೆ ಮನ್ನಣೆ ದೊರೆಯದಿರುವುದರಿಂದ ಅದು ಅವನತಿ ಅಂಚು ತಲುಪಿದೆ. ಇದರ ಉಳಿವಿಗೆ ನಾವೆಲ್ಲ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.
ಸಾಹಿತಿ ರಾಜಶೇಖರ ಮಠಪತಿ (ರಾಗಂ) ಪ್ರಾಸ್ತಾವಿಕ ಮಾತನಾಡಿ, ಬಯಲಾಟ ಕಲೆ ಮುಂದಿನ ಪೀಳಿಗೆಗೆ ಕೊಂಡೊಯ್ಯಲು, ಹಳ್ಳಿ, ನಗರಗಳಲ್ಲಿ ಬಯಲಾಟ ಪ್ರದರ್ಶನ ಹಾಗೂ ಕಲಾವಿದರಿಗೆ ಪ್ರೋತ್ಸಾಹದೊಂದಿಗೆ ವ್ಯಾಪಕ ಪ್ರಚಾರದ ಅವಶ್ಯಕತೆ ಇದೆ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಜಿ. ಜಂಗಮಶೆಟ್ಟಿ, ಎಸ್.ಎಲ್.ಮೇತ್ರಿ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ, ವಿಶ್ವೇಶ್ವರಿ ಹಿರೇಮಠ, ರಾಮಚಂದ್ರ ಬಿರಾದಾರ, ಡಾ| ರಾಜು ಹಿರೇಮಠ, ದಿನೇಶ ಥಂಬದ ವೇದಿಕೆಯಲ್ಲಿದ್ದರು. ನಂತರ ನಡೆದ ಚಿಂತಗೋಷ್ಠಿಯಲ್ಲಿ ಬಯಲಾಟದ ಬಿಟ್ಟಕ್ಕು ಹಾಗೂ ಸಾಧ್ಯತೆಗಳ ಕುರಿತು ಮಹಿಳಾ ವಿಶ್ವವಿದ್ಯಾಲಯದ ಡಾ|ನಾರಾಯಳ ಪವಾರ ಉಪನ್ಯಾಸ ನೀಡಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಆರ್.ಪಿ. ಬಗಲಿ,ಉಪನ್ಯಾಸಕ ಮನೋಜ ಕಟಗೇರಿ ಇದ್ದರು.