ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು 2011ರ ವಿಶ್ವಕಪ್ ವಿಜೇತ ಆಟಗಾರರ ಕುರಿತಾಗಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. 2011ರಲ್ಲಿ ಚಾಂಪಿಯನ್ ಆಗಿದ್ದ ತಂಡದ ಸದಸ್ಯರು ನಂತರ ತಂಡದಿಂದ ದೂರವಾಗಲು ಯಾರು ಕಾರಣ ಎಂದಿದ್ದಾರೆ.
“ ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಬಹುದು. ಆದರೆ 2012ರ ಬಳಿಕ ಭಾರತೀಯ ಕ್ರಿಕೆಟ್ ನಲ್ಲಿ ಹಲವಾರು ವಿಚಾರಗಳು ಇನ್ನಷ್ಟು ಉತ್ತಮವಾಗಬಹುದಿತ್ತು” ಎಂದು ಕ್ರಿಕ್ ನೆಕ್ಸ್ ಡಾಟ್ ಕಾಮ್ ಸಂದರ್ಶನದಲ್ಲಿ ಹರ್ಭಜನ್ ಹೇಳಿದ್ದಾರೆ.
“2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ನಂತರದ ದಿನಗಳಲ್ಲಿ ಯಾಕೆ ಒಟ್ಟಾಗಿ ಆಡಲಾಗಿಲ್ಲ ಎಂದು ನನಗೆ ಇನ್ನೂ ಅರ್ಥವಾಗಿಲ್ಲ. ನಾನು, ವೀರೆಂದ್ರ ಸೆಹವಾಗ್, ಗಂಭೀರ್, ಯುವರಾಜ್ ಸಿಂಗ್ ಟೀಂ ಇಂಡಿಯಾದಿಂದ ನಿವೃತ್ತರಾದ ಬಳಿಕವೂ ಐಪಿಎಲ್ ನಲ್ಲಿ ಸಕ್ರಿಯವಾಗಿ ಆಡಿದ್ದೇವೆ, 2011ರ ವಿಜೇತ ತಂಡ ಸದಸ್ಯರು ನಂತರ ಒಟ್ಟಿಗೆ ಆಡಲಿಲ್ಲ. ಯಾಕೆ? ಕೇವಲ ಕೆಲವರು ಮಾತ್ರ 2015ರ ವಿಶ್ವಕಪ್ ಆಡಿದರು. ಯಾಕೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ರೋಹಿತ್ ಶರ್ಮಾ ಸೂಕ್ತ: ರಿಕಿ ಪಾಂಟಿಂಗ್
ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕಳೆದ ಡಿಸೆಂಬರ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.