ದುಬೈ: ಏಷ್ಯಾ ಕಪ್ ಸೂಪರ್ ಹಂತದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ಥಾನ ವಿರುದ್ಧ ಸೋಲನುಭವಿಸಿದೆ. ರವಿವಾರ ದುಬೈ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಬಾಬರ್ ಅಜಂ ಪಡೆ ಐದು ವಿಕೆಟ್ ಅಂತರದ ಗೆಲುವು ಸಾಧಿಸಿತು. ಆದರೆ 18 ನೇ ಓವರ್ ನಲ್ಲಿ ಕ್ಯಾಚ್ ಬಿಟ್ಟ ಅರ್ಶದೀಪ್ ಸಿಂಗ್ ವಿರುದ್ಧ ಅಭಿಮಾನಿಗಳು ಟೀಕೆ ಮಾಡಲಾರಂಭಿಸಿದ್ದಾರೆ.
ರವಿ ಬಿಷ್ಣೋಯಿ ಎಸೆದ 18 ನೇ ಓವರ್ ನಲ್ಲಿ ಪಾಕ್ ಸ್ಪೋಟಕ ಆಟಗಾರ ಆಸಿಫ್ ಅಲಿ ನೀಡಿದ ಕ್ಯಾಚನ್ನು ಅರ್ಶದೀಪ್ ಸಿಂಗ್ ಕೈಚೆಲ್ಲಿದರು. ಬಳಿಕ ಆಸಿಫ್ ಅಲಿ ಎಂಟು ಎಸೆತಗಳಲ್ಲಿ 16 ರನ್ ಗಳಿಸಿದರು. ಈ ಕ್ಯಾಚ್ ಡ್ರಾಪ್ ಕಾರಣದಿಂದ ಭಾರತ ತಂಡ ಪಂದ್ಯ ಸೋಲನುಭವಿಸಿತು ಎಂದು ಹಲವರು ಆರೋಪಿಸಿ. ಅರ್ಶದೀಪ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅರ್ಶದೀಪ್ ಸಿಂಗ್ ವಿರುದ್ಧ ಖಲಿಸ್ಥಾನಿ ಎಂದು ನಿಂದೆ ಮಾಡಲಾಗುತ್ತಿದೆ. ಉತ್ತಮ ಬೌಲಿಂಗ್ ನಡೆಸಿದರೂ ಕ್ಯಾಚ್ ಬಿಟ್ಟ ಕಾರಣದಿಂದ ನೆಟ್ಟಿಗರು ಅರ್ಶದೀಪ್ ಸಿಂಗ್ ರನ್ನು ವಿಲನ್ ರೀತಿ ಬಿಂಬಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಖಲಿಸ್ಥಾನಿ ಹ್ಯಾಷ್ ಟ್ಯಾಗ್ ನಡಿ ಪೋಸ್ಟ್ ಗಳು ಹೆಚ್ಚಾಗುತ್ತಿದೆ.
ಅಭಿಮಾನಿಗಳ ಈ ವರ್ತನೆ ವಿರುದ್ಧ ಕಿಡಿಕಾರಿರುವ ಹಲವು ಮಾಜಿ ಆಟಗಾರರು, ಯುವ ಬೌಲರ್ ನ ಬೆಂಬಲಕ್ಕೆ ನಿಂತಿದ್ದಾರೆ. ಮಾಜಿ ಆಟಗಾರರಾದ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಪಾಕ್ ನ ಮೊಹಮ್ಮದ್ ಹಫೀಜ್ ಯುವ ಆಟಗಾರನ ರಕ್ಷಣೆಗೆ ನಿಂತಿದ್ದಾರೆ.
ಇದನ್ನೂ ಓದಿ:ಹುಣಸೂರಿನ ವಿವಿದೆಡೆ ಕೊಡವರ ಕೈಲ್ (ಪೊಲ್ದ್) ಮುಹೂರ್ತ ಆಚರಣೆ
“ಯುವ ಅರ್ಶ್‌ದೀಪ್ ಸಿಂಗ್ ಅವರನ್ನು ಟೀಕಿಸುವುದನ್ನು ನಿಲ್ಲಿಸಿ. ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್‌ಗಳನ್ನು ಬಿಡುವುದಿಲ್ಲ. ನಮ್ಮ ಹುಡುಗರ ಬಗ್ಗೆ ನಮಗೆ ಹೆಮ್ಮೆ ಇದೆ. ಪಾಕಿಸ್ತಾನ ಉತ್ತಮವಾಗಿ ಆಡಿದೆ. ಈ ವೇದಿಕೆಯಲ್ಲಿ ಆರ್ಶ್ ಮತ್ತು ಟೀಮ್ ನ ಬಗ್ಗೆ ಅಗ್ಗದ ಮಾತುಗಳನ್ನು ಹೇಳುವ ಮೂಲಕ ನಮ್ಮದೇ ಹುಡುಗರನ್ನು ಕೀಳು ಮಾಡುವ ಇಂತಹ ಜನರಿಗೆ ನಾಚಿಕೆಯಾಗಬೇಕು. ಅರ್ಶ್ ಈಸ್ ಗೋಲ್ಡ್” ಎಂದು ಹರ್ಭಜನ್ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಪಾಕಿಸ್ಥಾನದ ಮಾಜಿ ಆಟಗಾರ ಹಫೀಜ್ ಟ್ವೀಟ್ ಮಾಡಿ, “ಎಲ್ಲಾ ಭಾರತೀಯ ತಂಡದ ಅಭಿಮಾನಿಗಳಿಗೆ ನನ್ನ ವಿನಂತಿ. ಕ್ರೀಡೆಯಲ್ಲಿ ನಾವು ಮನುಷ್ಯರಂತೆ ತಪ್ಪುಗಳನ್ನು ಮಾಡುತ್ತೇವೆ. ದಯವಿಟ್ಟು ಈ ತಪ್ಪುಗಳ ಮೇಲೆ ಯಾರನ್ನೂ ಅವಮಾನಿಸಬೇಡಿ “ ಎಂದು ಹೇಳಿದ್ದಾರೆ.