ಮಧುಗಿರಿ: ಹೆಣ್ಣು ಮಗು ಹುಟ್ಟಿದೆ ಎಂಬ ಕಾರಣದಿಂದ ಆಕೆಯ ಗಂಡ ಮತ್ತು ಗಂಡನ ಮನೆಯವರು ಚಿತ್ರ ಹಿಂಸೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಪತ್ನಿಯು ನ್ಯಾಯಾಲಯದ ಮೆಟ್ಟಿಲೇರಿದ ಘಟನೆ ನಡೆದಿದೆ.
ಘಟನೆ ವಿವರ:
2016ರ ಮೇ 1 ರಂದು ದಂಪತಿಯ ವಿವಾಹವಾಗಿದ್ದು, ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.ವಿವಾಹದ ಸಂದರ್ಭದಲ್ಲಿ ಚಿನ್ನದ ಸರ, 8 ಗ್ರಾಂ ಉಂಗುರ ಮತ್ತು 30 ಸಾವಿರ ರೂ. ವರದಕ್ಷಿಣೆ ನೀಡಲಾಗಿತ್ತು. ಮದುವೆಯ ನಂತರ ಸುಖವಾಗಿಯೇ ಇದ್ದ ದಾಂಪತ್ಯ ಜೀವನದಲ್ಲಿ ಪತ್ನಿಗೆ ಹೆಣ್ಣು ಮಗು ಹುಟ್ಟಿರುವುದೇ ಗಂಡನ ಮನೆಯವರಿಗೆ ಸಹಿಸಲಾಗಿಲ್ಲ. ಅಂದಿನಿಂದ ಕುಟುಂಬದಲ್ಲಿ ಕಲಹ ಉಂಟಾಗಿ ದೂರದಾರ ಸ್ವಂತ ಸೋದರ ಮಾವನ ಮಗಳಾಗಿದ್ದರೂ ಮಹಿಳೆಯ ಮೇಲೆ ಆಕೆಯ ಗಂಡ, ಅತ್ತೆ ಮತ್ತು ಗಂಡನ ಅಣ್ಣ ಸೇರಿಕೊಂಡು ಪ್ರತಿ ನಿತ್ಯ ದೈಹಿಕ ಹಿಂಸೆ ನೀಡುತ್ತಿದ್ದು, ನಿನ್ನನ್ನು ಮದುವೆಯಾಗಿರುವುದು ವರದಕ್ಷಿಣೆಗಾಗಿ, ನಿಮ್ಮ ಅಪ್ಪನ ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬಾ, ನೀನು ನಾವು ಹೇಳಿದಂತೆ ಕೇಳಿಕೊಂಡು ಕೆಲಸದಾಳಿನ ರೀತಿ ಮನೆಯಲ್ಲಿ ಬಿದ್ದಿರಬೇಕು.
ನನಗೆ ನನ್ನ ಅಮ್ಮ, ಅಪ್ಪ, ಅಣ್ಣ ಮುಖ್ಯ. ನೀನು ಹೆತ್ತಿರುವುದು ಹೆಣ್ಣು ಮಗು. ಆ ಮಗುವನ್ನು ಹಾಗೂ ನಿನ್ನನ್ನು ನೋಡಿಕೊಳ್ಳಲು ನಿಮ್ಮಪ್ಪನ ಮನೆಯಿಂದ ಮತ್ತಷ್ಟು ಹಣ ತೆಗೆದುಕೊಂಡು ಬಾ ಎಂದು ನಿರಂತರ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ಆದೇಶದಂತೆ ಮಧುಗಿರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.