Advertisement

Arrested: ಸಿಇಟಿ ಸೀಟು ಬ್ಲಾಕಿಂಗ್‌: ಮತ್ತಿಬ್ಬರ ಬಂಧನ

10:58 AM Dec 04, 2024 | Team Udayavani |

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್‌ ಕಾಲೇ ಜುಗಳಲ್ಲಿ ಬಹುಬೇಡಿಕೆಯ ಎಂಜಿನಿಯರಿಂಗ್‌ ಸೀಟು ಬ್ಲಾಕಿಂಗ್‌ ದಂಧೆ ಪ್ರಕರಣದ ಸಂಬಂಧ ಕೆಇಎನ ಹೊರ ಗುತ್ತಿಗೆ ನೌಕರ ಸೇರಿ 10 ಮಂದಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಹೊರ ಗುತ್ತಿಗೆ ನೌಕರ ಬಿ.ಎಸ್‌.ಅವಿನಾಶ್‌(36), ಕಡೂರು ಮೂಲದ ಶ್ರೀಹರ್ಷ (42), ಎಸ್‌.ಆರ್‌.ಪ್ರಕಾಶ್‌ (42), ಪುರುಷೋತ್ತಮ(24), ಎಸ್‌.ಕೆ.ಶಶಿಕುಮಾರ್‌(34), ಎಸ್‌.ಎಲ್‌.ಪುನೀತ್‌(27), ಕನಕಪುರ ಸಾತನೂರಿನ ಎಸ್‌.ಸಿ.ರವಿಶಂಕರ್‌(56), ಬೆಂಗಳೂರಿನ ದಿಲ್ಶದ್‌ ಆಲಾಂ(33), ನೌಶದ್‌ ಆಲಾಂ(42) ಹಾಗೂ ಆರ್‌. ಜಿ.ತಿಲಕ್‌(60) ಬಂಧಿತರು.

ಆರೋಪಿಗಳಿಂದ 13 ಮೊಬೈಲ್‌ಗ‌ಳು, ಕೆಲವು ದಾಖಲಾತಿಗಳು ಹಾಗೂ ಸುಟ್ಟು ಹಾಕಿರುವ ಮೂರು ಲ್ಯಾಪ್‌ಟಾಪ್‌ಗ್ಳ ಅವಶೇಷಗಳನ್ನು ಜಪ್ತಿ ಮಾಡಲಾಗಿದೆ ಎಂದು ಕಮಿಷನರ್‌ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಕ್ರಮದ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ನ.13ರಂದು ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಪ್ರಕರಣದ ತನಿಖೆಗೆ ಇಳಿದ ಪೊಲೀಸರು, ಕೆಇಎ ವೆಬ್‌ಸೈಟ್‌ನಲ್ಲಿ ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಗಳ ಸರ್ಕಾರಿ ಕೋಟಾದ ಸೀಟು ಬ್ಲಾಕ್‌ ಮಾಡಿದ್ದ ಮೊಬೈಲ್‌ ಸಂಖ್ಯೆಗಳ ಜಾಡು ಹಿಡಿದು ಪರಿಶೀಲಿಸಿ, ಮೊದಲಿಗೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸೀಟು ಬ್ಲಾಕಿಂಗ್‌ ದಂಧೆಯಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಇತರೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

Advertisement

ಮೂವರು ಮಧ್ಯವರ್ತಿಗಳು: ಆರೋಪಿಗಳ ಪೈಕಿ ಬೆಂಗಳೂರಿನ ದಿಲ್ಶದ್‌ ಆಲಾಂ, ನೌಶದ್‌ ಆಲಾಂ ಹಾಗೂ ತಿಲಕ್‌ ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಗಳ ಮಧ್ಯವರ್ತಿಗಳಾಗಿದ್ದಾರೆ. ಅಂದರೆ, ಉಳಿದ ಆರೋ ಪಿಗಳ ಸಹಾಯದಿಂದ ಸರ್ಕಾರಿ ಕೋಟಾದ ಸೀಟು ಗಳನ್ನು ಬ್ಲಾಕ್‌ ಮಾಡಿಸುತ್ತಿದ್ದರು. ನಂತರ ಆ ಸೀಟುಗಳು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಆಡಳಿತ ಮಂಡಳಿ ಸೀಟುಗಳಾಗಿ ಪರಿವರ್ತನೆಯಾಗುವಂತೆ ಸಂಚು ರೂಪಿಸಿದ್ದರು. ಬಳಿಕ ಕಾಲೇಜು ಆಡಳಿತ ಮಂಡ ಳಿಗಳು ಆ ಸೀಟುಗಳನ್ನು ಕಡಿಮೆ ರ್‍ಯಾಂಕ್‌ ಪಡೆದ ಅಭ್ಯ ರ್ಥಿಗಳಿಗೆ ನೀಡಿ ದುಬಾರಿ ಶುಲ್ಕ ಪಡೆದು ಲಾಭ ಮಾಡಿ ಕೊಳ್ಳುತ್ತಿದ್ದರು ವಿಚಾರಣೆಯಿಂದ ತಿಳಿದು ಬಂದಿದೆ.

ಪ್ರಕರಣದ ಮಾಸ್ಟರ್‌ ಮೈಂಡ್‌ ಶ್ರೀಹರ್ಷ, ಕೆಇಎ ಪ್ರಾಧಿಕಾರದ ಹೊರಗುತ್ತಿಗೆ ನೌಕರ ಅವಿನಾಶ್‌ಗೆ ಪ್ರತಿ ಸೀಟಿಗೆ 2-3 ಲಕ್ಷ ರೂ. ಹಣದ ಆಮಿಷವೊಡ್ಡಿ ಸಿಇಟಿ ಅರ್ಹ ಅಭ್ಯ ರ್ಥಿಗಳ ಮಾಹಿತಿ ಪಡೆಯುತ್ತಿದ್ದ. ಬಳಿಕ ಈ ಅರ್ಹ ಅಭ್ಯರ್ಥಿಗಳ ಪೈಕಿ ಕೆಲವರು ಎಂಜಿನಿಯರಿಂಗ್‌ ಹೊರತುಪಡಿಸಿ ಬೇರೆ ಕೋರ್ಸ್ ಗಳಿಗೆ ದಾಖಲಾಗುವ ಮಾಹಿತಿ ಪಡೆಯುತ್ತಿದ್ದ. ಅಲ್ಲದೆ, ಅದೇ ಅಭ್ಯರ್ಥಿಗಳ ಲಾಗಿನ್‌ ಐಡಿ, ಪಾಸ್‌ ವರ್ಡ್‌, ಸೀಕ್ರೆಟ್‌ ಕೀ ಪಡೆಯು ತ್ತಿದ್ದ. ಬಳಿಕ ಇತರೆ ಆರೋಪಿಗಳಾದ ಪ್ರಕಾಸ್‌, ಪುರು ಷೋತ್ತಮ, ಶಶಿಕುಮಾರ್‌, ಪುನೀತ್‌, ರವಿಶಂಕರ್‌ ವಿದ್ಯಾರ್ಥಿಗಳ ಸೋಗಿನಲ್ಲಿ ಶಿವಮೊಗ್ಗ, ದಾವಣಗೆರೆ, ಬೆಂಗಳೂರಿನಲ್ಲಿ ಕುಳಿತು ಲ್ಯಾಪ್‌ಟಾಪ್‌ ಬಳಸಿ ಕೆಇಎ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳನ್ನು ಬ್ಲಾಕ್‌ ಮಾಡಿಸುತ್ತಿದ್ದ. ಕೌನ್ಸಿಲಿಂಗ್‌ ಮುಗಿದ ಬಳಿಕ ಸರ್ಕಾರಿ ಕೋಟಾದ ಸೀಟುಗಳು ಖಾಸಗಿ ಕಾಲೇಜುಗಳ ಸೀಟುಗಳಾಗಿ ಪರಿವರ್ತಿಸುತ್ತಿದ್ದರು ಎಂಬುದು ಗೊತ್ತಾಗಿದೆ. ‌

ಏನಿದು ಪ್ರಕರಣ?: ಸಿಇಟಿ ಅರ್ಹ 52 ಅಭ್ಯರ್ಥಿಗಳ ಲಾಗಿನ್‌, ಪಾಸ್‌ವರ್ಡ್‌ ಹಾಗೂ ಸೀಕ್ರೇಟ್‌ ಕೀಯನ್ನು ಅನಧಿಕೃತವಾಗಿ ಪಡೆದುಕೊಂಡಿರುವ ಕೆಲ ಅಪರಿಚಿತ ವ್ಯಕ್ತಿಗಳು ಅಭ್ಯರ್ಥಿಗಳ ಪರವಾಗಿ ಕೆಇಎ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು, ಅಕಾಶ್‌ ಇನ್‌ ಸ್ಟಿ ಟ್ಯೂ ಟ್‌ ಆಫ್ ಎಂಜಿನಿಯರಿಂಗ್‌, ನ್ಯೂ ಹಾರಿಜಾನ್‌ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಸರ್ಕಾರದ ಕೋಟಾದಡಿ ಬರುವ ಎಂಜಿನಿಯರಿಂಗ್‌ ಸೀಟುಗಳನ್ನು ಬ್ಲಾಕ್‌ ಮಾಡಿದ್ದಾರೆ. ಅದರಿಂದ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು ಅರ್ಹ ಅಭ್ಯರ್ಥಿಗಳು ಹಾಗೂ ಕೆಇಎಗೆ ವಂಚಿಸಿದ್ದಾರೆ ಎಂದು ಕೆಇಎ ಆಡಳಿತಾಧಿಕಾರಿ ಮಲ್ಲೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ 3 ಲ್ಯಾಪ್‌ಟಾಪ್‌ ಸುಟ್ಟ ಆರೋಪಿಗಳು! ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳಾದ ಪ್ರಕಾಶ್‌, ಪುರುಷೋತ್ತಮ, ಶಶಿಕುಮಾರ್‌, ಪುನೀತ್‌ 3 ಲ್ಯಾಪ್‌ಟಾಪ್‌ ಗಳಿಗೆ ಬೆಂಕಿ ಹಚ್ಚಿ ಸುಟ್ಟಿ ಸಾಕ್ಷ್ಯ ನಾಶ ಪಡಿಸಿದ್ದಾರೆ. ತನಿಖೆ ವೇಳೆ ಪೊಲೀಸರು, ಈ ಮೂರು ಲ್ಯಾಪ್‌ಟಾಪ್‌ಗ್ಳ ಅವಶೇಷಗಳನ್ನು ಜಪ್ತಿ ಮಾಡಿದ್ದಾರೆ. ಇವರ ವಿರುದ್ಧ ಅಕ್ರಮದಲ್ಲಿ ಭಾಗಿ ಜತೆಗೆ, ಸಾಕ್ಷ್ಯ ನಾಶ ಪಡಿಸಿದ ಆರೋಪದಡಿಯೂ ಕೇಸ್‌ ದಾಖಲಿಸುವ ಸಾಧ್ಯತೆಯಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಿಂದೆ ದಂಧೆಯಲ್ಲಿ ಭಾಗಿ: ಬಂಧಿತ ಆರೋಪಿಗಳು ಈ ಹಿಂದೆಯೂ ಎಂಜಿನಿಯರಿಂಗ್‌, ನರ್ಸಿಂಗ್‌, ಮೆಡಿಕಲ್‌ ಸೀಟು ಬ್ಲಾಕಿಂಗ್‌ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಹೆಚ್ಚಿನ ತನಿಖೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next