ಧಾರವಾಡ: ಜಿಲ್ಲೆಯ ಸಫಾಯಿ ಕರ್ಮಚಾರಿಗಳಿಗೆ ಕಿರುಕುಳ ನೀಡುವಂತಹ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ ಹಿರೇಮನಿ ಅ ಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಫಾಯಿ ಕಾರ್ಮಿಕರ ಕಲ್ಯಾಣ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ, ಜೀವನಮಟ್ಟ, ಸೇವೆ, ಭವಿಷ್ಯ ನಿಧಿ ವಿಷಯಗಳ ಕುರಿತಂತೆ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಗುತ್ತಿಗೆದಾರರಿಂದ ಆಗುತ್ತಿರುವ ಕಿರುಕುಳ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇಂಥವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ಗುತ್ತಿಗೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಿರ್ಲಕ್ಷé ಮಾಡಿದರೆ ಅಧಿಕಾರಿಗಳ ವಿರುದ್ಧವೇ ಆಯೋಗದಿಂದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯ ಪಟ್ಟಣ ಪಂಚಾಯ್ತಿಗಳು, ಪುರಸಭೆಗಳು, ಮಹಾನಗರ ಪಾಲಿಕೆ, ಕರ್ನಾಟಕ ವಿಶ್ವವಿದ್ಯಾಲಯ, ಕಿಮ್ಸ್ ಹಾಗೂ ಡಿಮಾನ್ಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಗುತ್ತಿಗೆ ಹಾಗೂ ಕಾಯಂ ನೇಮಕಾತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 194 ಕುಟುಂಬ ಸೇರಿದಂತೆ ಒಟ್ಟು 8824 ಸಫಾಯಿ ಕರ್ಮಚಾರಿಗಳಿದ್ದಾರೆ.
ಆದರೆ ಅವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಗುತ್ತಿಗೆದಾರರು ಮತ್ತು ಅ ಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಅಥವಾ ಅವರ ಪ್ರಭಾವಕ್ಕೆ ಒಳಗಾಗಿ ಸಫಾಯಿ ಕರ್ಮಚಾರಿಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ಲಿಖೀತ ದೂರುಗಳು ಬಂದಿವೆ. ಹೀಗಾಗಿ ಸಫಾಯಿ ಕರ್ಮಚಾರಿಗಳಿಗೆ ಕಿರುಕುಳ ನಿಡುವಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಎಂ.ಎನ್. ಜೋಶಿ ಅವರೊಂದಿಗೆ ಕವಿವಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ನೇಮಕಾತಿ, ವೇತನ ಭತ್ಯೆ, ಇಎಸ್‌ಐ, ಸಂಚಿತ ನಿಧಿ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಚರ್ಚಿಸಿದರು. ಅಲ್ಲದೇ ಈ ಕುರಿತಂತೆ ತಕ್ಷಣ ಆಯೋಗಕ್ಕೆ ವರ ದಿ ನೀಡುವಂತೆ ಕವಿವಿ ಕುಲಸಚಿವರಿಗೆ ಸದಸ್ಯ ಜಗದೀಶ ಹಿರೇಮನಿ ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಅಳ್ನಾವರ, ಕುಂದಗೋಳ, ನವಲಗುಂದ ಸೇರಿದಂತೆ ವಿವಿಧ ಪುರಸಭೆ, ಪಟ್ಟಣ ಪಂಚಾಯ್ತಿಯ ಅ ಧಿಕಾರಿಗಳು ತಾವು ಕೈಗೊಂಡ ಕಾರ್ಯಗಳ ಬಗ್ಗೆ ವಿವರಿಸಿದರು. ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ, ಎಸ್‌ಪಿ ಜಿ. ಸಂಗೀತಾ, ಪಾಲಿಕೆ ಆಯುಕ್ತ ಮೇಜರ ಸಿದ್ದಲಿಂಗಯ್ಯ ಹಿರೇಮಠ, ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ವಿಜಯ ಗುಂಟ್ರಾಳ, ಲಕ್ಷ್ಮಣ ಬಕ್ಕಾಯಿ ಇದ್ದರು.