ಶಿವಮೊಗ್ಗ: ಮುಖ್ಯಮಂತ್ರಿಯವರ ಕುಮ್ಮಕ್ಕಿನಿಂದ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಿಂದೂ ಭಾವನೆ ಮೇಲೆ ಧಕ್ಕೆ ತರುವಂತಹ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಸರಕಾರ ಇಷ್ಟೊಂದು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪದೇ ಪದೇ ಹಿಂದೂ ಸಂಘಟನೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ರಾಜ್ಯದಾದ್ಯಂತ ಗಣೇಶ ವಿಸರ್ಜನೆ ಬಹಳ ಅರ್ಥಪೂರ್ಣವಾಗಿ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ನಾಗಮಂಗಲದಲ್ಲಿ ಘಟನೆ ನಡೆದಿದೆ. ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ದಾವಣಗೆರೆಯಲ್ಲಿ ಘಟನೆ ನಡೆದಿದೆ. ಹಿಂದೂ ಸಂಘಟನೆ ಮೇಲೆ ಹಬ್ಬದ ದಿನ ದಾಳಿ ನಡೆದಿದೆ ಎಂದು ಕಿಡಿಕಾರಿದರು.
ತುಮಕೂರಿನಲ್ಲಿ ಪೊಲೀಸರು ವಿದ್ಯಾರ್ಥಿಗಳು ಕಳುಹಿಸಬಾರದು ಎಂದು ಕುಲಸಚಿವರಿಗೆ ಪತ್ರ ಬರೆಯುತ್ತಾರೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಡಿ ಎಂದು ತಾಕೀತು ಮಾಡಿದ್ದಾರೆ. ದುರಂಹಕಾರ ಇಲ್ಲದಿದ್ದರೆ ಪತ್ರ ಬರೆಯುತ್ತಿರಲಿಲ್ಲ. ಹಿಂದೂ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸರಕಾರ ನಡೆದುಕೊಳ್ಳುತ್ತಿದೆ. ಕುಲಸಚಿವರು ಈ ಸುತ್ತೊಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರದ ನಡವಳಿಕೆ ದೇಶದ್ರೋಹಿಗಳಿಗೆ ದೊಡ್ಡ ಶಕ್ತಿ ತಂದುಕೊಡ್ತಿದೆ. ಸರಕಾರದ ನಡವಳಿಕೆ ರಾಜ್ಯಕ್ಕೆ ಮಾರಕವಾಗುತ್ತಿದೆ. ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಪ್ಯಾಲೆಸ್ಟೈನ್ ಧ್ವಜ ಹಾರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಸರಕಾರದ ಧೋರಣೆಯಿಂದ ಇಂತಹ ಘಟನೆ ನಡೆಯುತ್ತವೆ. ಮೊದಲೇ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಮುನಿರತ್ನ ತನಿಖೆಯಾಗಲಿ
ಮುನಿರತ್ನ ತನಿಖೆ ಸರಿಯಾದ ರೀತಿ ಆಗಬೇಕು. ತಪ್ಪು ಮಾಡಿದ್ದರೆ ಸೂಕ್ತ ತನಿಖೆಯಾಗಲಿ ನಾವು ಬೇಡ ಎನ್ನುವುದಿಲ್ಲ. ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಬಿ.ವೈ.ವಿಜಯೇಂದ್ರ ಹೇಳಿದರು.