Advertisement

Telangana: ಮುಸ್ಲಿಮರ ಮತಕ್ಕೆ ಗಾಳ- ಯುವ ಮುಸ್ಲಿಮರಿಗೆ ಐಟಿ ಪಾರ್ಕ್‌: KCR ಘೋಷಣೆ

10:29 PM Nov 24, 2023 | Team Udayavani |

ನವದೆಹಲಿ: “ತೆಲಂಗಾಣದಲ್ಲಿ ಭಾರತ್‌ ರಾಷ್ಟ್ರ ಸಮಿತಿ(ಬಿಆರ್‌ಎಸ್‌) ಸರ್ಕಾರವು ಮತ್ತೆ ಅಧಿಕಾರಕ್ಕೇರಿದರೆ ಯುವ ಮುಸ್ಲಿಮರಿಗೆಂದೇ ವಿಶೇಷ ಐಟಿ (ಮಾಹಿತಿ ತಂತ್ರಜ್ಞಾನ) ಪಾರ್ಕ್‌ ನಿರ್ಮಾಣ ಮಾಡುತ್ತೇನೆ.”

Advertisement

ಹೀಗೆಂದು ಘೋಷಿಸಿರುವುದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌. ತೆಲಂಗಾಣದಲ್ಲಿ ಕೆಸಿಆರ್‌ ಅವರು ಮುಸ್ಲಿಮರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನಾವು ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುತ್ತೇವೆ ಎಂಬ ಸಂದೇಶ ರವಾನೆ ಮಾಡುವ ಮೂಲಕ ಮುಸ್ಲಿಂ ಮತಗಳನ್ನು ಸೆಳೆಯಲು ಕೆಸಿಆರ್‌ ಯತ್ನಿಸಿದ್ದಾರೆ.

ಶುಕ್ರವಾರ ಮಹೇಶ್ವರಮ್‌ನಲ್ಲಿ ಬಿಆರ್‌ಎಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸುವ ವೇಳೆ ಅವರು ಈ ಘೋಷಣೆ ಮಾಡಿದ್ದಾರೆ. “ಹೈದರಾಬಾದ್‌ನ ಪಹಾಡಿ ಷರೀಫ್ ಸಮೀಪವೇ ಯುವ ಮುಸ್ಲಿಮರಿಗೆಂದೇ ಐಟಿ ಪಾರ್ಕ್‌ ನಿರ್ಮಾಣ ಮಾಡುತ್ತೇನೆ. ನಮ್ಮ ಸರ್ಕಾರವು ಎಲ್ಲರನ್ನೂ ಸಮಾನವಾಗಿ ಕಂಡಿದೆ ಮತ್ತು ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ನಾವು ನೀಡುತ್ತಿರುವ ಪಿಂಚಣಿಯು ಮುಸ್ಲಿಮರಿಗೂ ತಲುಪುತ್ತಿದೆ. ನಾವು ತೆರೆದಿರುವ ವಸತಿ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳೂ ಕಲಿಯುತ್ತಿದ್ದಾರೆ’ ಎಂದಿದ್ದಾರೆ.

ಜತೆಗೆ, ಬಿಆರ್‌ಎಸ್‌ ಸರ್ಕಾರವು ಕಳೆದ ಒಂದು ದಶಕದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 12 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. ಅದಕ್ಕೂ ಹಿಂದಿನ ಸರ್ಕಾರವು ಕೇವಲ 2 ಸಾವಿರ ಕೋಟಿಯಷ್ಟೇ ವೆಚ್ಚ ಮಾಡಿತ್ತು ಎಂದೂ ಕೆಸಿಆರ್‌ ಹೇಳಿದ್ದಾರೆ.

ಮುಸ್ಲಿಮರ ಓಲೈಕೆಗೆ ಕಾರಣವೇನು?
ತೆಲಂಗಾಣ ರಾಜಧಾನಿ ಹೈದರಾಬಾದ್‌ ಮುಸ್ಲಿಂ ಬಾಹುಳ್ಯದ ಪ್ರದೇಶ. ಇದೇ ಕಾರಣಕ್ಕಾಗಿ ಮುಸ್ಲಿಂ ಮತ ಬುಟ್ಟಿಯನ್ನು ತೆಕ್ಕೆಯಲ್ಲಿಟ್ಟುಕೊಂಡಿರುವ ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಪಕ್ಷವನ್ನು ಕೆಸಿಆರ್‌ ಆಲಿಂಗಿಸಿಕೊಂಡಿದ್ದು. ಬಿಆರ್‌ಎಸ್‌ ಆಡಳಿತದಲ್ಲಿ ಮುಸ್ಲಿಮರು ಸುರಕ್ಷಿತ ಎಂಬ ಭಾವನೆ ಬರಿಸಲೆಂದೇ ಕೆಸಿಆರ್‌ ಅವರು ಅಲ್ಪಸಂಖ್ಯಾತರಿಗೆ ನೆರವಾಗುವ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಆದರೆ, ಈ ಬಾರಿ ಮುಸ್ಲಿಂ ಮತದಾರರ ಮೂಡ್‌ ಬದಲಾಗುತ್ತಿದ್ದು, ಇಲ್ಲಿ ಕೆಸಿಆರ್‌ ಅಥವಾ ಒವೈಸಿ ಮ್ಯಾಜಿಕ್‌ ಕೆಲಸ ಮಾಡಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ವಾದ.

Advertisement

ಒವೈಸಿ ಅವರು ಮೋದಿ ಸರ್ಕಾರದ ಬಿ ಟೀಂ ಎಂದು ಕಾಂಗ್ರೆಸ್‌ ಒತ್ತಿ ಒತ್ತಿ ಹೇಳುತ್ತಿದೆ. ಅಲ್ಲದೇ, ಹಿಜಾಬ್‌ ವಿವಾದದ ಕುರಿತು ಕೆಸಿಆರ್‌ ತಳೆದಿದ್ದ ಮೌನ, ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್‌ ವಿಧೇಯಕ ಮಂಡನೆ ವೇಳೆ ಬಿಆರ್‌ಎಸ್‌ ಗೈರಾಗಿದ್ದು ಸೇರಿದಂತೆ ಇತ್ತೀಚೆಗಿನ ಕೆಲವು ಘಟನೆಗಳು ಕೆಸಿಆರ್‌ ಬಗ್ಗೆ ಮುಸ್ಲಿಮರಿಗೆ ಅನುಮಾನ ಮೂಡಲು ಕಾರಣವಾಗಿದೆ. ಇದೆಲ್ಲವೂ ಈ ಚುನಾವಣೆಯಲ್ಲಿ ಪ್ರತಿಬಿಂಬಿಸುವ ಸಾಧ್ಯತೆಯಿದ್ದು, ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ಆಕರ್ಷಿತವಾಗಿವೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಮುಸ್ಲಿಂ ಮತದಾರರು ಹೇಗೆ ಜೆಡಿಎಸ್‌ ಕೈಬಿಟ್ಟು ಕಾಂಗ್ರೆಸ್‌ ಕೈಹಿಡಿದರೋ, ಅದೇ ಬೆಳವಣಿಗೆ ತೆಲಂಗಾಣದಲ್ಲೂ ಮರುಕಳಿಸಬಹುದೇ ಎಂಬ ಚಿಂತೆ ಕೆಸಿಆರ್‌ರನ್ನು ಕಾಡುತ್ತಿದೆ. ಮುಸ್ಲಿಮರಿಗೆ ಬಂಪರ್‌ ಘೋಷಣೆಗಳು ಹೊರಬೀಳಲು ಇವೆಲ್ಲವೂ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಶಾ, ಪ್ರಿಯಾಂಕಾ ರ್ಯಾಲಿ:
ತೆಲಂಗಾಣದ ಅರ್ಮೂರ್‌ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, “ಕೆಸಿಆರ್‌ ಅವರು ಸಾವಿರಾರು ಕೋಟಿ ರೂ. ಮೌಲ್ಯದ ಹಗರಣಗಳನ್ನು ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೇರಿದರೆ ಈ ಎಲ್ಲ ಹಗರಣಗಳನ್ನೂ ತನಿಖೆ ನಡೆಸಿ, ತಪ್ಪಿತಸ್ಥರನ್ನು ಜೈಲಿಗಟ್ಟುತ್ತೇವೆ’ ಎಂದಿದ್ದಾರೆ. ಇದೇ ವೇಳೆ, ಶುಕ್ರವಾರ ಪಾಲಕುರ್ತಿಯಲ್ಲಿ ಪ್ರಚಾರ ನಡೆಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ, ತೆಲಂಗಾಣವು ದೇಶದಲ್ಲೇ ನಿರುದ್ಯೋಗ ಹೆಚ್ಚಿರುವ ರಾಜ್ಯಗಳ ಪೈಕಿ ಒಂದಾಗಿದೆ. ಕಾಂಗ್ರೆಸ್‌ ಇಲ್ಲಿ ಅಧಿಕಾರಕ್ಕೇರಿದರೆ 2 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದಿದ್ದಾರೆ.

ಕಾರಿನಲ್ಲಿದ್ದ 5 ಕೋಟಿ ರೂ. ವಶ
ತೆಲಂಗಾಣದ ಗಾಚಿಬೌಲಿ ಪ್ರದೇಶದಲ್ಲಿ ಕಾರೊಂದರಲ್ಲಿದ್ದ 5 ಕೋಟಿ ರೂ. ನಗದನ್ನು ಹೈದರಾಬಾದ್‌ ಪೊಲೀಸರು ಜಪ್ತಿ ಮಾಡಿದ್ದಾರೆ. ವಾಹನಗಳ ತಪಾಸಣೆ ವೇಳೆ ಕಾರಿನಲ್ಲಿ ನಗದು ಪತ್ತೆಯಾಗಿದ್ದು, ಸೂಕ್ತ ದಾಖಲೆಗಳನ್ನು ನೀಡದ ಕಾರಣ ಜಪ್ತಿ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಮತ್ತೂಂದು ಘಟನೆಯಲ್ಲಿ, ಕಾರೊಂದರಲ್ಲಿ ಒಯ್ಯಲಾಗುತ್ತಿದ್ದ 2 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಎರಡೂ ಪ್ರಕರಣ ಸಂಬಂಧ 7 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಗೃಹ ಸಾಲ ಬಡ್ಡಿ ಸಬ್ಸಿಡಿ ಘೋಷಣೆ
ತೆಲಂಗಾಣದಲ್ಲಿ ಬಿಆರ್‌ಎಸ್‌ ಪಕ್ಷವು ಮಧ್ಯಮ ವರ್ಗದ ಕುಟುಂಬಗಳಿಗೆ ಗೃಹ ಸಾಲ ಬಡ್ಡಿ ಸಬ್ಸಿಡಿ ಯೋಜನೆಯನ್ನು ಘೋಷಿಸಿದೆ. ಅದರಂತೆ, 1200ರಿಂದ 1500 ಚ.ಅಡಿಯ ಅಪಾರ್ಟ್‌ಮೆಂಟ್‌ ಖರೀದಿಸಿದರೆ, ಅವರು ಮಾಡುವ ಗೃಹ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಜತೆಗೆ, ಈಗ ಇರುವ ಡಬಲ್‌ ಬೆಡ್‌ರೂಂ ಗೃಹ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯೂ ಮುಂದುವರಿಯಲಿದೆ ಎಂದು ಬಿಆರ್‌ಎಸ್‌ ತಿಳಿಸಿದೆ.

ದಶಕಗಳ ಪರಿಶ್ರಮವಿರುವ ಕಾರಣ ಈ ಬಾರಿಯ ಪರೀಕ್ಷೆಯನ್ನು ಬಹಳ ಸುಲಭವಾಗಿ ಪಾಸ್‌ ಆಗಬಹುದು. ಬಿಆರ್‌ಎಸ್‌ ಶತಕ ಬಾರಿಸುವುದು ಖಚಿತ.
– ಕೆ. ಕವಿತಾ, ಬಿಆರ್‌ಎಸ್‌ ನಾಯಕಿ

ತೆಲಂಗಾಣ ರಾಜ್ಯ ರಚನೆಯ ಪ್ರಮುಖ ಉದ್ದೇಶಗಳ ಪೈಕಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿ ಎಂಬ ಉದ್ದೇಶವೂ ಒಂದು. ಆದರೆ, ದೇಶದಲ್ಲಿ ನಿರುದ್ಯೋಗ ಶೇ.10ರಷ್ಟಿದ್ದರೆ, ತೆಲಂಗಾಣದಲ್ಲಿ ಶೇ.15ರಷ್ಟಿದೆ.
– ಜೈರಾಂ ರಮೇಶ್‌, ಕಾಂಗ್ರೆಸ್‌ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next