ಬೆಂಗಳೂರು: ಹಿರಿಯ ಮೇಲಧಿಕಾರಿಗಳ ಕಿರುಕುಳ ಸಂಬಂಧ ಡಿವೈಎಸ್‌ಪಿ ದರ್ಜೆ ಅಧಿಕಾರಿಯೊಬ್ಬರು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರಿಗೆ ಪತ್ರ ಬರೆದು ತಮ್ಮ ನೋವು ತೊಡಿಕೊಂಡಿದ್ದಾರೆ. ಆದರೆ, ಪತ್ರದಲ್ಲಿ ಡಿವೈಎಸ್‌ಪಿ ಹೆಸರು ಬರೆದಿಲ್ಲ, ಸಹಿ ಕೂಡ ಮಾಡಿಲ್ಲ.
2017 ಡಿಸೆಂಬರ್‌ನಲ್ಲಿ ಬರೆದ ನಾಲ್ಕು ಪತ್ರಗಳಿಗೆ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಜೂ.18ರಂದು 5ನೇ ಪ್ರತ್ರ ಬರೆದಿರುವ ಅಧಿಕಾರಿ, “ನಿಮಗೆ ಕನ್ನಡ ಓದಲು, ಬರೆಯಲು ಬಾರದ ಕಾರಣಕ್ಕೆ ಈ ಹಿಂದಿನ ಪತ್ರಗಳಿಗೆ ಉತ್ತರ ಬಂದಿಲ್ಲ ಎಂದು ತಿಳಿಯಿತು. ನಿಮ್ಮನ್ನು ನೇರವಾಗಿ ಭೇಟಿಯಾಗಿ ಕುಂದುಕೊರತೆ ಹೇಳಿಕೊಳ್ಳಬೇಕೆಂದರೂ ಭೇಟಿಗೆ ಅವಕಾಶ ನೀಡುತ್ತಿಲ್ಲ.
ನನ್ನ ಮಗಳ ಭವಿಷ್ಯದ ದೃಷ್ಟಿಯಿಂದ ಮೌಖೀಕವಾಗಿ ಮಾಹಿತಿ ನೀಡಿ ಕೇವಲ ಒಂದು ದಿನ ರಜೆ ತೆಗೆದುಕೊಂಡಿದಕ್ಕೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ,’ ಎಂದು ಮತ್ತೂಮ್ಮೆ ಕನ್ನಡದಲ್ಲೇ ಪತ್ರ ಬರೆದಿದ್ದಾರೆ. ಕೆಲ ತಿಂಗಳ ಹಿಂದೆ ಡಿವೈಎಸ್‌ಪಿ ದರ್ಜೆ ಅಧಿಕಾರಿಗಳಿಗೆ 23 ದಿನಗಳ ಕಾಲ ತರಬೇತಿ ನೀಡಲಾಗಿತ್ತು. ಈ ಸಂದರ್ಭದಲ್ಲೇ ನನ್ನ ಮಗಳಿಗೆ ಕ್ರೀಡೆಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು.
ಮಗಳನ್ನು ತರಬೇತಿ ಕ್ಯಾಂಪ್‌ಗೆ ಕರೆದೊಯ್ಯಲು ಕೇವಲ ಒಂದು ದಿನ ರಜೆ ಕೊಡಿ ಎಂದು 9 ದಿನಗಳ ಹಿಂದೆಯೇ ಹಿರಿಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೆ. ರಜೆ ಸಿಗಲಿಲ್ಲ. ಹೀಗಾಗಿ, ಮೌಖೀಕವಾಗಿ ಹಿರಿಯ ಅಧಿಕಾರಿಗಳಿಗೆ ಹೇಳಿ ಹೋಗಿದ್ದೆ. ಇದನ್ನೇ ಅಶಿಸ್ತು ಎಂದು ನೋಟಿಸ್ ನೀಡಲಾಗಿತ್ತು. ಆದರೆ, ಕೆಲವು ಅಧಿಕಾರಿಗಳು ಹೇಳದೆ ಕೇಳದೆ ರಜೆ ಪಡೆದರೂ ಅವರಿಗೆ ನೋಟಿಸ್ ನೀಡಿಲ್ಲ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಗಣಪತಿ, ಕಲ್ಲಪ್ಪ ಹಂಡಿಭಾಗ್ ಹೆಸರು ಪ್ರಸ್ತಾಪ: ಎರಡು ವರ್ಷಗಳ ಹಿಂದೆ ನಿಗೂಢವಾಗಿ ಮೃತಪಟ್ಟ ಡಿವೈಎಸ್‌ಪಿ ಗಣಪತಿ ಮತ್ತು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಗಳ ಉಲ್ಲೇಖ ಪತ್ರದಲ್ಲಿದೆ. “ಗಣಪತಿ ವಿರುದ್ಧ ಕ್ಷುಲ್ಲಕ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಹಿರಿಯ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಅವರು ನೇಣು ಹಾಕಿಕೊಂಡರು.
ಬಳಿಕ ಈ ಕುರಿತ ಎಲ್ಲ ಪ್ರಕರಣಗಳಲ್ಲಿ ಕ್ಲೀನ್‌ಚೀಟ್ ನೀಡಲಾಗಿತ್ತು. ಕಲ್ಲಪ್ಪ ಹಿಂಡಿಭಾಗ್ ಪ್ರಕರಣದಲ್ಲೂ ಪ್ರಮಾಣಿಕ ತನಿಖೆ ನಡೆದಿಲ್ಲ,’ ಎಂದಿರುವ ಡಿವೈಎಸ್‌ಪಿ, ಇನ್‌ಸ್ಪೆಕ್ಟರ್ ಗಿರೀಶ್ ಹಾಗೂ ರಾಜಾನುಕುಂಟೆ ಪೇದೆ ಆನಂದ್ ಮೇಲಿನ ದೌರ್ಜನ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಈ ಕುರಿತು ರಾಜ್ಯ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳನ್ನು “ಉದಯವಾಣಿ’ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಡಿವೈಎಸ್ಪಿ ಒಬ್ಬರು ಡಿಜಿಪಿಗೆ ಬರೆದಿರುವ ಪತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಡಿಜಿಪಿಯಿಂದ ಮಾಹಿತಿ ಪಡೆಯುತ್ತೇನೆ. ಒಂದು ವೇಳೆ ಕಿರುಕುಳ ಇದ್ದರೆ ನೇರವಾಗಿ ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಬಹದು. ದಯವಿಟ್ಟು ಯಾರು ಕೂಡ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ