Advertisement

ಪ್ರಾಧ್ಯಾಪಕಿಯ ಕುರಿತು ಮಾನಹಾನಿ ಕರಪತ್ರ, ಪೋಸ್ಟರ್: ಮೂವರ ಸೆರೆ

12:47 PM Apr 20, 2022 | Team Udayavani |

ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೋರ್ವರ ಬಗ್ಗೆ ಕೀಳು ಮಟ್ಟದ ಭಾಷೆ, ಮಾನಹಾನಿಕರವಾಗಿ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ, ಪ್ರಕಾಶ್ ಶೆಣೈ (44), ಬಂಟ್ವಾಳದ ಸಿದ್ದಕಟ್ಟೆ, ಮೇಗಿನ ಉಳಿರೋಡಿ ನಿವಾಸಿ, ಪ್ರದೀಪ್ ಪೂಜಾರಿ (36), ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಸೀತಾನದಿ ನಡ್ಪಾಲು ನಿವಾಸಿ ತಾರಾನಾಥ ಬಿ ಎಸ್ ಶೆಟ್ಟಿ, (32) ಬಂಧಿತ ಆರೋಪಿಗಳು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪ್ರತಿಷ್ಠಿತ ಕಾಲೇಜಿನಲ್ಲಿ ಆರೋಪಿಗಳು ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರಾಗಿ, ಕಾರ್ಯನಿರ್ವಹಿಸುತ್ತಿದ್ದು, ಕಾಲೇಜಿನಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ನಡುವಿನ ಪ್ರಾಧ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರದ ಗಲಾಟೆ ನಡೆದಿದೆ. ಈ ವಿಚಾರವಾಗಿ ಕಾಲೇಜಿನ ಮಹಿಳಾ ಪ್ರಾಧ್ಯಾಪಕಿಯ ವಿರುದ್ಧ ಮಾನಹಾನಿಕರವಾದ ಪತ್ರವನ್ನು, ಪೋಸ್ಟರ್ ಗಳನ್ನು ತಯಾರಿಸಿ ಅಂಚೆ ಮೂಲಕ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿ ಮಾನಹಾನಿ, ಜೀವ ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು.

ಇದನ್ನೂ ಓದಿ:  ಕೋಮು ಸಂಘರ್ಷ: ಮಂಗಳೂರಿನಲ್ಲಿ’ಮಾರಿ ಗುಡಿ’ ನಕಲಿ ಖಾತೆ: ಓರ್ವನ ಬಂಧನ

ಪ್ರಾರಂಭದಲ್ಲಿ ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮೂಲಕ ಮಹಿಳಾ ಪ್ರಾಧ್ಯಾಪಕಿಯ ಭಾವಚಿತ್ರದೊಂದಿಗೆ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದರು. ಇದಾದ ನಂತರ ಮಹಿಳಾ ಪ್ರಾಧ್ಯಾಪಕಿಯ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಗಳನ್ನು ತಯಾರಿಸಿ ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್ ಆರ್ ಪುರ, ಶಿವಮೊಗ್ಗ ಮುಂತಾದ ಬಸ್ ಸ್ಟಾಂಡ್ ಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸಿದ್ದಾರೆ.

Advertisement

ಈ ಅಶ್ಲೀಲ ಪೋಸ್ಟರ್‍ ಗಳನ್ನು ಇದನ್ನು ನೋಡಿದ ಸಾರ್ವಜನಿಕರು, ಪ್ರಾದ್ಯಾಪಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು.

ಈ ಕುರಿತು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಾಧ್ಯಾಪಕಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳಿಂದ 3 ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಪ್ರದೀಪ್ ಪೂಜಾರಿ ಎಂಬವರ ವಿರುದ್ಧ ಈ ಹಿಂದೆ 2019 ನೇ ಇಸವಿಯಲ್ಲಿ ಕಾಲೇಜ್ ಪ್ರಾಧ್ಯಾಪಕಿಯೊಬ್ಬರಿಗೆ ಮಾನಹಾನಿಗೆ ಯತ್ನಿಸಿದ ಪ್ರಕರಣ ದಾಖಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next