ಬೆಂಗಳೂರು: ಅಸ್ಸಾಂ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ.ಅಂಕಿತಾ ದತ್ತಾಗೆ ಕಿರುಕುಳ ನೀಡಿದ ಆರೋಪ ಸಂಬಂಧ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ಗೆ ಬಂಧನ ಭೀತಿ ಎದುರಾಗಿದೆ. ಶ್ರೀನಿವಾಸ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ತಮ್ಮ ವಿರುದ್ಧ ಆರೋಪ ಸಂಬಂಧ ಶ್ರೀನಿವಾಸ್ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಆದರೆ, ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸಿಸಿಎಚ್ 72 ಕೋರ್ಟ್, ಇದೊಂದು ಗಂಭೀರ ಪ್ರಕರಣ. ಮಹಿಳೆ ಮೇಲಿನ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಪೊಲೀಸರಿಂದ ತನಿಖೆ ಅಗತ್ಯವಿದೆ ಎಂದು ಉಲ್ಲೇಖೀಸಿ ಅರ್ಜಿ ವಜಾಗೊಳಿಸಿದೆ.
ಅದಕ್ಕೂ ಮೊದಲು ಯುವತಿಯ ಪರ ವಕೀಲರು, ಪ್ರಕರಣದ ದೂರುದಾರೆ ಮಹಿಳೆ ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ 164 ಹೇಳಿಕೆ ದಾಖಲಿಸಿದ್ದಾರೆ. ದೂರುದಾರೆ ಮಹಿಳೆಯಾಗಿದ್ದು, ಆಕೆಯ ಗೌರವಕ್ಕೆ ಚ್ಯುತಿ ಬಂದಿದೆ ಎಂದು ವಾದ ಮಂಡಿಸಿದರು. ಇನ್ನು ಅಸ್ಸಾಂ ಪೊಲೀಸರ ಪರ ಅಲ್ಲಿನ ಎಸ್‌ಪಿಪಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಏ.23ರಂದು ಅಸ್ಸಾಂನ ಜಂಟಿ ಪೊಲೀಸ್ ಆಯುಕ್ತ ಪ್ರತೀಕ್ ದುಬೆ ನೇತೃತ್ವದ ಐವರು ಅಧಿಕಾರಿಗಳ ತಂಡ ಬಸವೇಶ್ವರನಗರದ ಮೋದಿ ರಸ್ತೆಯಲ್ಲಿರುವ ಶ್ರೀನಿವಾಸ್ ಮನೆಗೆ ಆಗಮಿಸಿ, ಮೇ 2ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಶ್ರೀನಿವಾಸ್ ಮನೆಯಲ್ಲಿ ಇರಲಿಲ್ಲವಾದರಿಂದ ಮನೆಗೆ ನೋಟಿಸ್ ಅಂಟಿಸಿ ತೆರಳಿದ್ದರು. ಈ ಮಧ್ಯೆ ಶ್ರೀನಿವಾಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಅಸ್ಸಾಂನ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿದ್ದ ಅಂಕಿತಾ ದತ್ತಾ, ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತು ಅಸ್ಸಾಂನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವರ್ಧನ್ ಯಾದವ್ ಕಳೆದ ಆರು ತಿಂಗಳಿನಿಂದ ತಮಗೆ ನಿರಂತರ ತಾರತಮ್ಮ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂಬಂಧ ದಿಸ್ಪುರ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ರಾಷ್ಟ್ರೀಯ ಅಧ್ಯಕ್ಷನ ವಿರುದ್ಧ ಆರೋಪಿಸಿದ ಅಂಕಿತಾದತ್ತಾರನ್ನು ಕಾಂಗ್ರೆಸ್, ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಆರು ವರ್ಷಗಳ ಕಾಲ ಉಚ್ಚಾಟಿಸಿದೆ.