ಹರಪನಹಳ್ಳಿ: ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಹಿರೇಕೆರೆ ವೃತ್ತದ ಬಳಿ ಗುರುವಾರ ಬೆಳಂಬೆಳಿಗ್ಗೆ ಜೆಸಿಬಿ ಯಂತ್ರಗಳ ರೌದ್ರನರ್ತನ ಮೊಳಗಿದ್ದು, ರಸ್ತೆ ಬದಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕಟ್ಟಡಗಳು ಹಾಗೂ ಶೆಡ್‌ಗಳನ್ನು ತೆರವುಗೊಳಿಸಲಾಯಿತು.
ಲೊಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ನಿರ್ದೇಶನದಂತೆ ಗುರುವಾರ ಬೆಳಗ್ಗೆ 5 ಗಂಟೆ ಸಮಯದಲ್ಲಿ ಜನರು ಸಿಹಿ ನಿದ್ರೆಯಲ್ಲಿರುವಾಗಲೇ ಪುರಸಭೆ ವತಿಯಿಂದ ಕಾರ್ಯಚರಣೆ ಶುರುವಾಗಿದ್ದು, ರಸ್ತೆಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮಾರ್ಬಲ್, ಗ್ಯಾರೇಜ್, ಟೀ ಅಂಗಡಿ, ಆಟೋಮೊಬೈಲ್ ಅಂಗಡಿ, ಗೂಡಂಗಡಿ ಸೇರಿದಂತೆ 29ಕ್ಕೂ ಹೆಚ್ಚು ಕಟ್ಟಡ-ಶೆಡ್‌ಗಳನ್ನು ಮೂರು ಜೆಸಿಬಿ ಯಂತ್ರಗಳು ಧರೆಗುರುಳಿಸಿದವು.
ಲೊಕೋಪಯೋಗಿ ಇಲಾಖೆ ವತಿಯಿಂದ 2.5 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ಕಾಮಗಾರಿಗೆ ಅಪಘಾತ ವಲಯವೆಂದು ಗುರುತಿಸಿರುವ ಪ್ರದೇಶದಲ್ಲಿ ಬರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ವಿನಂತಿಸಿಕೊಂಡಿದ್ದರು. ಹೀಗಾಗಿ ಹಿರೇಕೆರೆ ವೃತ್ತದ ಸುತ್ತಮುತ್ತಲಿನ ರಸ್ತೆಯ ಇಕ್ಕೆಲದಲ್ಲಿರುವ ಅನಧಿಕೃತ ಕಟ್ಟಡ ಹಾಗೂ ಶೆಡ್‌ಗಳನ್ನು ಪುರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್ ನಿರ್ದೇಶನದಂತೆ ತೆರವು ಕಾರ್ಯಚರಣೆ ನಡೆಸಲಾಗಿದೆ.
ಪಟ್ಟಣದ ಹೊಸಪೇಟೆಯಿಂದ ಶಿವಮೊಗ್ಗ ರಾಜ್ಯ ಹೆದ್ದಾರಿ 25ರ ರಸ್ತೆ ಸರಪಳಿ 77.8ರಿಂದ 79.00ರವರೆಗೆ ಹಾದು ಹೋಗುವ ಪ್ರದೇಶ ಅಪಘಾತ ವಲಯವೆಂದು ಗುರುತಿಸಲಾಗಿದ್ದು, ಈ ರಸ್ತೆ ಮಧ್ಯ ಭಾಗದಿಂದ 21.5 ಮೀಟರ್‌ನ ವಿಸ್ತೀರ್ಣದಲ್ಲಿ ರಸ್ತೆಗಳಿರಬೇಕು. ಆದರೆ ಹಿರೇಕೆರೆ ವೃತ್ತದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಕಟ್ಟಡ ಹಾಗೂ ಶೆಡ್‌ಗಳ ಹಾಕಿಕೊಳ್ಳಲಾಗಿತ್ತು. ಮಾಲೀಕರಿಗೆ ತೆರವುಗೊಳಿಸುವಂತೆ ಅನೇಕ ಭಾರಿ ಮೌಖೀಕವಾಗಿ ತಿಳಿಸಿದ್ದರೂ ಸಹ ತೆರವುಗೊಳಿಸದ ಹಿನ್ನೆಲೆ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ತೆರವುಗೊಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜ ನಾಯ್ಕ ತಿಳಿಸಿದರು.
ತೆರವು ಕಾರ್ಯಾಚರಣೆ ಮಾಹಿತಿ ಪಡೆದುಕೊಂಡಿದ್ದ ಅಂಗಡಿಗಳ ಮಾಲೀಕರು ಸ್ವಯಂ ಆಗಿ ಸಾಮಗ್ರಿಗಳನ್ನು ತೆಗೆದುಕೊಂಡಿದ್ದರು. ಕಣ್ಣೇದುರಲ್ಲಿಯೇ ಕಟ್ಟಡಗಳು ನೆಲಸಮವಾದರೂ ಯಾರು ವಿರೋಧ ವ್ಯಕ್ತಪಡಿಸಲಿಲ್ಲ. ರಸ್ತೆ ಬದಿಯಲ್ಲಿದ್ದ ಕೆಲವೊಂದು ಮರಗಳನ್ನು ಧರೆಗುರುಳಿಸಲಾಯಿತು. ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಸಿಪಿಐ ಕೆ.ಕುಮಾರ್, ಪಿಎಸ್‌ಐ ಸಿ. ಪ್ರಕಾಶ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಪೊಲೀಸ್ ಹಾಗೂ ಗೃಹರಕ್ಷಕ ದಳ ತಂಡ ಒಳಗೊಂಡು ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಬೆಸ್ಕಾಂ ಇಲಾಖೆಯ ಎಇಇ ಎಸ್. ಭೀಮಪ್ಪ, ಎಇ ಕೆ.ಮಾರುತೇಶ್, ಇಂಜಿನಿಯರ್ ಕುಬೇಂದ್ರನಾಯ್ಕ, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪಿ. ಮಂಜುನಾಥ್, ಸಮುದಾಯ ಸಂಘಟನಾಧಿಕಾರಿ ಸಿ. ಲೋಕ್ಯಾನಾಯ್ಕ ಸೇರಿದಂತೆ ಪೌರಕಾರ್ಮಿಕ ಸಿಬ್ಬಂದಿ ಹಾಜರಿದ್ದರು.