Advertisement

ಅನ್ಯ ತಾಲೂಕಿನವರ ಕ್ವಾರಂಟೈನ್‌ಗೆ ವಿರೋಧ

04:17 PM Jun 18, 2020 | Naveen |

ಹರಪನಹಳ್ಳಿ: ತಾಲೂಕಿನ ನಜೀರ ನಗರದ ಮೂರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದವರನ್ನು ಕರೆ ತಂದು ಕ್ವಾರಂಟೈನ್‌ ಮಾಡಿರುವುದಕ್ಕೆ ಈ ಭಾಗದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಕೋಗಳಿ ಗ್ರಾಮದಲ್ಲಿ ಒಟ್ಟು 6 ಜನರಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರನ್ನು ತಂದು ಕ್ವಾರಂಟೈನ್‌ ಮಾಡಲಾಗಿದೆ. ಆದರೆ ಶಾಲೆಯ ಅಡುಗೆ ಸಿಬ್ಬಂದಿ ಹಾಗೂ ಕಾವಲುಗಾರು ಸಮೀಪದ ಗ್ರಾಮದಲ್ಲಿ ಬಂದು ಸುತ್ತಾಡಿ ಹೋಗುತ್ತಿದ್ದಾರೆ. ಇದರಿಂದ ಕೋವಿಡ್ ಸೊಂಕು ನಮಗೂ ಹರಡುತ್ತದೆ ಎಂಬ ಭಯ ಬೆಣ್ಣೆಹಳ್ಳಿ, ಪೃಥ್ವೇಶ್ವರ, ಲೋಲೇಶ್ವರ, ಚಿಗಟೇರಿ, ಮುತ್ತಿಗಿ ಗ್ರಾಮಸ್ಥರನ್ನು ಕಾಡುತ್ತಿದೆ. ಹೀಗಾಗಿ ಶಾಲೆ ಬಳಿ ಬುಧವಾರ ಜಮಾಯಿಸಿದ ಗ್ರಾಮಸ್ಥರು ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ರಾತ್ರೋರಾತ್ರಿ ಗ್ರಾಮ ಪಂಚಾಯ್ತಿ, ಪೊಲೀಸ್‌ ಇಲಾಖೆಗೆ ಮಾಹಿತಿ ನೀಡದೇ ಕರೆ ತಂದು ಕ್ವಾರಂಟೈನ್‌ ಮಾಡಲಾಗಿದೆ. ಶಾಲೆಯಲ್ಲಿ ಎಸ್‌ಎಸ್ ಎಲ್‌ಸಿ ಓದುವ ಮಕ್ಕಳಿದ್ದು, ಶೀಘ್ರವೇ ಪರೀಕ್ಷೆಗಳು ನಡೆಯಲಿವೆ. ಇಲ್ಲಿಯ ಅಡುಗೆ ಸಿಬ್ಬಂದಿಗೆ, ಕಾವಲುಗಾರರಿಗೆ ಮಾಸ್ಕ್, ಸ್ಯಾನಿಟೈಸರ್‌ ಸೇರಿದಂತೆ ಯಾವುದೇ ರಕ್ಷಣಾ ಸಾಧನಾ ವಿತರಿಸಿಲ್ಲ. ಏನಾದರೂ ತೊಂದರೆ ಉಂಟಾದರೆ ಯಾರು ಹೊಣೆ ಎಂದು ಚಿಟಗೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಕೆ.ಪ್ರಕಾಶ್‌, ಬಿಜೆಪಿ ಮುಖಂಡ ಬೆಣ್ಣೆಹಳ್ಳಿ ರೇವಣ್ಣ ಮತ್ತಿತರರು ಕಿಡಿಕಾರಿದರಲ್ಲದೇ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಉಪವಿಬಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್‌ ಅವರು, ಕೊಟ್ಟೂರು ತಾಲೂಕು ಹರಪನಹಳ್ಳಿ ಉಪವಿಭಾಗ ವ್ಯಾಪ್ತಿಗೆ ಬರುತ್ತದೆ. ಅಲ್ಲದೇ ಕೊಟ್ಟೂರು ಸಮೀಪವೇ ಶಾಲೆ ಇರುವುರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ಪಾಸಿಟವ್‌ ಬಂದಿರುವ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದರವರನ್ನು ಇಲ್ಲಿಗೆ ಕರೆತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೊಟ್ಟೂರು ತಾಲೂಕಿನಲ್ಲಿ ಕೇವಲ 1 ವಸತಿ ಶಾಲೆ ಇದ್ದು, ಈಗಾಗಲೇ ಕೊಟ್ಟೂರು ಪೊಲೀಸ್‌ ಠಾಣೆ ಸೀಲ್‌ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿಯ ಒಟ್ಟು 47 ಜನ ಪೊಲೀಸರನ್ನು ಅಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ತಾಲೂಕು ಕೇಂದ್ರಕ್ಕೆ ಶಾಲೆ ಸಮೀಪವಿರುವುದರಿಂದ ಇಲ್ಲಿಗೆ ಕರೆ ತರಲಾಗಿದೆ. ಇನ್ನೂ 5 ದಿನಗಳ ನಂತರ ಅವರನ್ನು ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆ ಮಾಡಲಾಗುವುದು. ಕ್ವಾರಂಟೈನ್‌ ಕೇಂದ್ರದ ಸಿಬ್ಬಂದಿಗೆ ರಕ್ಷಣಾ ಸಾಧನಾಗಳನ್ನು ವಿತರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ಗ್ರಾಮಸ್ಥರಿಗೆ ಮಾಹಿತಿ ನೀಡಿ ಮನವೊಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next