Advertisement

ಅನ್ಯರಾಜ್ಯದಿಂದ ಬಂದವರಿಗೆ ಕ್ವಾರಂಟೈನ್‌ ಕಡ್ಡಾಯ: ಡಿಸಿ

05:48 PM May 14, 2020 | Naveen |

ಹರಪನಹಳ್ಳಿ: ಅಂತಾರಾಜ್ಯದಿಂದ ಜಿಲ್ಲೆಗೆ ಯಾರೇ ಬಂದರೂ ಅವರನ್ನು ಕಡ್ಡಾಯವಾಗಿ ನಿಗದಿತ ಹಾಸ್ಟೆಲ್‌ ಅಥವಾ ಪೇಯಿಂಗ್‌ ವ್ಯವಸ್ಥೆ ಮೂಲಕ ಕ್ವಾರಂಟೈನ್‌ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಪಂ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಹರಪನಹಳ್ಳಿ ಉಪವಿಭಾಗದ ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು ಮೂರು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬೆಂಗಳೂರು, ತಮಿಳುನಾಡು, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಿಂದ ಜನ ಆಗಮಿಸುತ್ತಿದ್ದು, ಹರಪನಹಳ್ಳಿ ಮತ್ತು ಕೂಡ್ಲಿಗಿಯ ಕಾನಹೊಸಹಳ್ಳಿ ಹೈರಿಸ್ಕ್ ಚೆಕ್‌ ಪೋಸ್ಟ್‌ಗಳಾಗಿದ್ದು, ಎಚ್ಚರದಿಂದ ಇರಬೇಕಿದೆ. ದಾವಣಗೆರೆ ನಗರದಲ್ಲಿ ಹೆಚ್ಚು ಕೊರೊನಾ ಪಾಸಿಟಿವ್‌ ಪ್ರಕರಣಗಳಿರುವುದರಿಂದ ಹರಪನಹಳ್ಳಿಗೆ ದಾವಣಗೆರೆ ಸಮೀಪವಿದ್ದು, ಯಾರು ಹೋಗುವುದು, ಬರುವುದು ಮಾಡಬಾರದು. ಜನರ ಅನಗತ್ಯ ಓಡಾಟಕ್ಕೆ ಬ್ರೇಕ್‌ ಹಾಕಬೇಕಿದ್ದು, ಚೆಕ್‌ಪೋಸ್ಟ್‌ಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ಹಾಗೂ ಮನೆ ಮನೆಗೆ ತೆರಳಿ ಸರ್ವೇ ನಡೆಸುವಂತೆ ಸೂಚಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ರಚಿಸಲಾದ ಟಾಸ್ಕ್ ಫೋರ್ಸ್‌ ಸಮಿತಿ ಹಳ್ಳಿಗಳಲ್ಲಿ ಕಣ್ಗಾವಲಿಡಬೇಕು. ಗ್ರಾಮಕ್ಕೆ ಯಾರೇ ಹೊಸಬರು ಬಂದರೂ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹಾಗೆಯೇ ತಾ.ಪಂ ಇಒಗಳು ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕ್ವಾರಂಟೈನ್‌ ಕೇಂದ್ರಗಳಿಗೆ ವೈದ್ಯರನ್ನು ಕರೆದುಕೊಂಡು ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕೊರೊನಾದಿಂದ ಕನಿಷ್ಠ 1 ವರ್ಷವಾದರೂ ನಾವು ಮುಂಜಾಗೃತೆ ವಹಿಸಬೇಕು. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ವೈದ್ಯರಿಗೆ ನಿರ್ದೇಶನ ನೀಡಿದರು. ತರಬೇತಿ ಪಡೆದ ತಹಶೀಲ್ದಾರ್‌ಗಳು ಬಿಎಲ್‌ ಒಗಳಿಗೆ ಸರಿಯಾದ ನಿರ್ದೇಶನ ನೀಡುವ ಮೂಲಕ ನಾಳೆಯಿಂದಲೇ 5 ದಿನ ತ್ರಿಲೇಯರ್‌ ಮಾಸ್ಕ್ ಸೇರಿದಂತೆ ರಕ್ಷಾ ಕವಚಗಳನ್ನು ಕೊಟ್ಟು ಜ್ವರದ ಲಕ್ಷಣ ಹೊಂದಿರುವವರ ಮಾಹಿತಿ ಸಂಗ್ರಹಿಸಬೇಕು. ಅಗತ್ಯಬಿದ್ದರೆ ಗ್ರಾ.ಪಂ ಸಿಬ್ಬಂದಿ ಬಳಕೆ ಮಾಡಿಕೊಳ್ಳಿ, ಆಯಾ ತಾಲೂಕು ಮಟ್ಟದಲ್ಲಿ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಅವರ ಮೇಲೆ ಕೇಸ್‌ ದಾಖಲಿಸುವಂತೆ ತಹಶೀಲ್ದಾರ್‌ ಗಳಿಗೆ ಸೂಚಿಸಿದರು.

ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ನೋಡಿಕೊಳ್ಳಬೇಕು. ಖಾಸಗಿ ಬೋರವೆಲ್‌ ಮತ್ತು ಟ್ಯಾಂಕರ್‌ ಮಾಲೀಕರಿಗೆ ಗ್ರಾ.ಪಂ ಬದಲು ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ನೇರವಾಗಿ ಅವರ ಖಾತೆಗೆ ಹಣ ಹಾಕಲಿದ್ದೇವೆ. ವೆಬ್‌ಸೈಟ್‌ಗಳಿಗೆ ಆಯಾ ತಾಲೂಕಿನ ಎಲ್ಲಾ ವಿವರವನ್ನು ಕೂಡಲೇ ಅಪಡೇಟ್‌ ಮಾಡಬೇಕು ಎಂದ ಅವರು, ಹರಪನಹಳ್ಳಿ ತಾಲೂಕು ಅಧಿಕಾರಿಗಳು ಅನ್ಯ ನಗರಗಳಿಂದ ಪ್ರತಿನಿತ್ಯ ಓಡಾಡದೇ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ಆದೇಶಿಸಿದರು.

ಡಿಎಚ್‌ಒ ಜನಾರ್ದನ್‌ ಮಾತನಾಡಿ, ಕೆಮ್ಮು, ನೆಗಡಿ, ಜ್ವರ ಬಂದ ತಕ್ಷಣ ಭಯಪಡಬೇಕಿಲ್ಲ. ಸರಿಯಾಗಿ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಮಾಸ್ಕ್, ಕಿಟ್‌ ಸೇರಿದಂತೆ ಅಗತ್ಯ ಬೇಡಿಕೆ ಕುರಿತು ಮಾಹಿತಿ ನೀಡಿದಲ್ಲಿ ತಕ್ಷಣವೇ ಒದಗಿಸುತ್ತೇವೆ ಎಂದು ತಿಳಿಸಿದರು. ಕೊರೊನಾ ನೋಡೆಲ್‌ ಅಧಿಕಾರಿ ಪಿ.ಎನ್‌. ಲೋಕೇಶ್‌, ತಾಲೂಕು ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್‌ ಮಾತನಾಡಿದರು. ಹರಪನಹಳ್ಳಿ ತಹಶೀಲ್ದಾರ್‌ ಡಾ| ನಾಗವೇಣಿ, ಕೊಟ್ಟೂರು ತಹಶೀಲ್ದಾರ್‌ ಜಿ.ಅನಿಲಕುಮಾರ್‌, ಹಡಗಲಿ ತಹಶೀಲ್ದಾರ್‌ ಕೆ.ವಿಜಯಕುಮಾರ್‌, ಡಿವೈಎಸ್ಪಿ ಮಲ್ಲೇಶ್‌ ದೊಡ್ಮನಿ, ಸಿಪಿಐ ಕೆ.ಕುಮಾರ್‌, ಕೊಟ್ಟೂರು ಸಿಪಿಐ ರವೀಂದ್ರ ಎಂ.ಕುರಬಗಟ್ಟಿ, ಹಡಗಲಿ ಸಿಪಿಐ ಮಾಲತೇಶ್‌ ಕೂನಬೇವು, ಹರಪನಹಳ್ಳಿ ತಾಪಂ ಇಒ ಅನಂತರಾಜು, ಕೊಟ್ಟೂರು ಇಒ ಬಸಣ್ಣ, ಹಡಗಲಿ ಇಒ ಸೋಮಶೇಖರ, ಹರಪನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಬಿ.ಆರ್‌.ನಾಗರಾಜ ನಾಯ್ಕ, ಕೊಟ್ಟೂರು ಪ.ಪಂ ಮುಖ್ಯಾಧಿಕಾರಿ ಎಚ್‌.ಎಫ್‌. ಬಿದಿರಿ, ಹಡಗಲಿ ಮುಖ್ಯಾಧಿಕಾರಿ ಡಿ.ಬಿ. ವೀರಣ್ಣ, ಹರಪನಹಳ್ಳಿ ಟಿಎಚ್‌ಒ ಡಾ| ಇನಾಯತ್‌, ಕೊಟ್ಟೂರು ಟಿಎಚ್‌ಒ ಡಾ| ಷಣ್ಮುಖನಾಯ್ಕ, ಹಡಗಲಿ ಟಿಎಚ್‌ಒ ಡಾ| ಬದ್ಯಾನಾಯ್ಕ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next