Advertisement

ಕಾಫಿ ತೋಟದಿಂದ ಕ್ವಾರಂಟೈನ್‌ಗೆ

01:59 PM Apr 17, 2020 | Naveen |

ಹರಪನಹಳ್ಳಿ: ಹೊಟ್ಟೆಪಾಡಿಗಾಗಿ ಕಾಫಿ ಸೀಮೆಗೆ ತೆರಳಿ ಸ್ವ-ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ತಾಲೂಕಿನ ಕರೆಕಾನಹಳ್ಳಿ ತಾಂಡಾದ 22 ಜನರನ್ನು ಗುರುವಾರ ಹೋಂ ಕ್ವಾರಂಟೈನ್‌ ಮಾಡಲಾಗಿದೆ.

Advertisement

19 ದೊಡ್ಡವರು, ಇಬ್ಬರು ಚಿಕ್ಕ ಮಕ್ಕಳು ಸೇರಿ ಒಟ್ಟು 21 ಜನರು ಮತ್ತು ಓರ್ವ ಚಾಲಕನನ್ನು ಮಾಚಿಹಳ್ಳಿ ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸರ್ಕಾರಿ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಲಾಗಿದೆ. ಉಚ್ಚಂಗಿದುರ್ಗ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಿದಾಗ ಒಂದು ಆಟೊದಲ್ಲಿ ಜನರನ್ನು ಸಾಗಿಸುತ್ತಿದ್ದರು. ವಿಚಾರಣೆ ಮಾಡಿದಾಗ ಚಿಕ್ಕಮಗಳೂರು ಜಿಲ್ಲೆಯ ಕಾಫಿ ತೋಟದಿಂದ ಬಂದಿರುವುದು ದೃಢಪಟ್ಟಿದೆ ಎಂದು ಅರಸೀಕೆರೆ ಠಾಣೆ ಪಿಎಸ್‌ಐ ಕಿರಣ್‌ ಕುಮಾರ ತಿಳಿಸಿದ್ದಾರೆ.

ಊರಲ್ಲಿ ಕೆಲಸವಿಲ್ಲದ್ದರಿಂದ ಕೂಲಿ ಅರಸಿ ಎರಡು ತಿಂಗಳ ಹಿಂದೆ ಕಾಫಿ ಎಸ್ಟೇಟ್‌ಗೆ ತೆರಳಿದ್ದರು. ಕಾಫಿ ತೋಟದಲ್ಲಿ ದಿನಕ್ಕೆ 300 ಕೂಲಿ ಕೊಡುತ್ತಿದ್ದರು. ಕೆಲಸವಿಲ್ಲದಾಗ ಸಾಹುಕಾರರು ಕೂಲಿ ಕೊಡುವುದಿಲ್ಲ. ದುಡಿದ ಹಣವೆಲ್ಲಾ ಖರ್ಚಾಗುತ್ತದೆ. ದೇಶವನ್ನೇ ಬಂದ್‌ ಮಾಡಿದ್ದಾರೆ ಎಂದು ನಮ್ಮೂರಿಗೆ ಬರುತ್ತಿದ್ದಾಗ ಅಧಿಕಾರಿಗಳು ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗೆ ಕರೆ ತಂದಿದ್ದಾರೆ. ಪಕ್ಕದಲ್ಲೇ ನಮ್ಮೂರಿದೆ. ತಂದೆ, ತಾಯಿ, ಮಕ್ಕಳಿದ್ದಾರೆ. ದಯವಿಟ್ಟು ನಮ್ಮೂರಿಗೆ ಕಳಿಸಿಕೊಡಿ ಎಂದು ಮಹಿಳೆಯರು ಅಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದರು.

ಆಟೊದಲ್ಲಿ ಪ್ರಯಾಣಿಸುತ್ತಿದ್ದ 22 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ವಲಸಿಗರಾಗಿರುವ ಕಾರಣ ಅವರನ್ನು ನಿರಾಶ್ರಿತರ ಕೇಂದ್ರದಲ್ಲಿ ಉಳಿಯಲು ಸೂಚಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಇನಾಯತ್‌ ತಿಳಿಸಿದರು. ನಿರಾಶ್ರಿತ ಕೇಂದ್ರದಲ್ಲಿರುವ ತೆಲಂಗಾಣದ ಜನರಿಗೆ ನಿತ್ಯ ದವಸ ಧಾನ್ಯ ಕೊಡಲಾಗುತ್ತಿದೆ. ಈಗ ಹೊಸದಾಗಿ ಬಂದಿರುವವರಿಗೂ ಊಟ ನೀಡಲಾಗಿದೆ. ವಸತಿ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮುಂದಿನ ಆದೇಶ ಬರುವ ತನಕ ಒಟ್ಟು 104 ಜನರು ನಿರಾಶ್ರಿತರ ಕೇಂದ್ರದಲ್ಲಿಯೇ ಉಳಿಯಬೇಕು ಎಂದು ಅಧಿಕಾರಿಗಳು ತಿಳಿಸಿದರು. ತಹಶೀಲ್ದಾರ್‌ ಡಾ| ನಾಗವೇಣಿ, ಸಿಪಿಐ ಕೆ.ಕುಮಾರ್‌, ಪಿಎಸ್‌ಐ ಕಿರಣ್‌ಕುಮಾರ, ಬಿಸಿಎಂ ವಿಸ್ತರಣಾಧಿಕಾರಿ ಭೀಮಾ ನಾಯ್ಕ, ಸಿಡಿಪಿಒ ಮಂಜುನಾಥ, ಎನ್‌.ಜಿ. ಬಸವರಾಜ್‌, ಅಂಬರೀಶ್‌ ಇದ್ದರು.

ನಂಜನಗೂಡಿನಿಂದ ಬಂದವರಿಗೆ ಪ್ರತ್ಯೇಕ ವ್ಯವಸ್ಥೆ: ಮೈಸೂರಿನ ನಂಜನಗೂಡು ಹತ್ತಿರದ ತಾಂಡಪುರ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರು ಗುರುವಾರ ಹರಪನಹಳ್ಳಿಗೆ ಆಗಮಿಸಿದ್ದಾರೆ. ಪಟ್ಟಣದ ಹರಿಹರ ರಸ್ತೆಯ ಆಶ್ರಯ ಕ್ಯಾಂಪ್‌ನ ಮೂರು ಯುವಕರು ತಾಂಡಪುರ ಕ್ಯಾಂಟಿನ್‌ ನಲ್ಲಿ ಕೆಲಸ ಮಾಡುತ್ತಿದ್ದರು. ಹೋಟೆಲ್‌ ಬಾಗಿಲು ಹಾಕಿರುವುದರಿಂದ ಅಲ್ಲಿಂದ ಪಾಸ್‌ ಪಡೆದು ಕಾರಿನಲ್ಲಿ ಬಂದಿದ್ದಾರೆ. ನಂಜನಗೂಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸರ್ಕಾರಿ ನಿರಾಶ್ರಿತರ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next