ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಆಸ್ಪತ್ರೆಯ ಆಂಬ್ಯುಲೆನ್ಸ್ ಕಳೆದ ನಾಲ್ಕು ತಿಂಗಳಿಂದ ದುರಸ್ತಿ ಭಾಗ್ಯ ಕಾಣದೇ ಆಸ್ಪತ್ರೆ ಆವರಣದಲ್ಲೇ ನಿಂತಿದೆ. ಇದರಿಂದ ತುರ್ತು ಸೇವೆ ಇಲ್ಲದೆ ರೋಗಿಗಳು ಮತ್ತು ಅವರ ಕುಟುಂಬದವರು ಪರದಾಡುವಂತಾಗಿದೆ.
ಅಪಾರ ಭಕ್ತರನ್ನು ಹೊಂದಿರುವ ಉಚ್ಚೆಂಗೆಮ್ಮದೇವಿಯ ದೇವಸ್ಥಾನ ಉಚ್ಚಂಗಿದುರ್ಗ ಗ್ರಾಮದಲ್ಲಿ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ದೌಡಾಯಿಸುತ್ತದೆ. ಆದರೆ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರಂತರ ಸೇವೆ ನೀಡುತ್ತಿದ್ದ 108 ಆಂಬ್ಯುಲೆನ್ಸ್ ಟೈರ್ ಸಮಸ್ಯೆಯಿಂದ ತಿಂಗಳಾದರೂ ದುರಸ್ತಿ ಕಂಡಿಲ್ಲ. ರೋಗಿಗಳ ಪಾಲಿಗೆ ಪ್ರಾಣ ಉಳಿಸುವ ಸಂಜೀವಿನಿಯಾಗಬೇಕಿದ್ದ ಆಂಬ್ಯುಲೆನ್ಸ್ ಮೂಲೆ ಸೇರಿರುವುದರಿಂದ ರೋಗಿಗಳು ಪರದಾಡುತ್ತಿದ್ದಾರೆ.
ರೋಗಿಗಳು ಬೇರೆ ದಾರಿಯಿಲ್ಲದೆ ಖಾಸಗಿ ಆಂಬ್ಯುಲೆನ್ಸ್‌ಗಳ ಮೊರೆ ಹೋಗುತ್ತಿದ್ದಾರೆ. ಉಚ್ಚಂಗಿದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತ ಮುತ್ತಲಿನ 40ಕ್ಕೂ ಹೆಚ್ಚು ಹಳ್ಳಿಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ರೋಗಿಗಳು ಹಾಗೂ ಉಚ್ಚೆಂಗೆಮ್ಮದೇವಿ ದೇವಸ್ಥಾನಕ್ಕೆ ನಿತ್ಯವೂ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಜನ ಬಡವರಿಗೆ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಇಲ್ಲದೇ ತೊಂದರೆ ಎದುರಾಗಿದ್ದು, ಕೆಲವು ಸಂದರ್ಭದಲ್ಲಿ ರೋಗಿಗಳು ಖಾಸಗಿ ವಾಹನ ಬಾಡಿಗೆ ರೂಪದಲ್ಲಿ ತೆಗೆದುಕೊಂಡು ಹೋದರೆ ಇನ್ನೂ ಕೆಲವರು ಆರ್ಥಿಕ ತೊಂದರೆಯಿಂದ ಬಂದ ದಾರಿಗೆ ವಾಪಸ್ ಗ್ರಾಮಕ್ಕೆ ಹೋದ ಘಟನೆಗಳು ನಡೆದಿವೆ. ಯಾವುದಾದರೂ ಅಧಿಕಾರಿ ಓಡಾಟಕ್ಕೆ ಇರುವ ವಾಹನಕ್ಕೆ ಈ ಸ್ಥಿತಿ ಬಂದಿದ್ದರೆ 10-15 ದಿನಗಳಲ್ಲೆ ದುರಸ್ತಿಯಾಗಿ ರಸ್ತೆಗೆ ಇಳಿಯುತ್ತಿತ್ತು. ಆದರೆ ಬಡ ಜನರ ಜೀವ ರಕ್ಷಕ ಆಂಬ್ಯುಲೆನ್ಸ್‌ಗೆ ಮಾತ್ರ ಇದರ ಭಾಗ್ಯವಿಲ್ಲ.
ಆ್ಯಂಬುಲೆನ್ಸ್ ಉಸ್ತುವಾರಿವಹಿಸಿಕೊಂಡಿರುವ ಜಿವಿಕೆ ಕಂಪನಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗೆ ವಾಹನವನ್ನು ಸರಿಪಡಿಸಲು ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಚ್ಚಂಗಿದುರ್ಗ ಗ್ರಾಮದ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್‌ಗೆ ಹೊಸ ಟೈರ್ ಹಾಕಿಸುವಂತೆ ನಮ್ಮ ಕಂಪನಿಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಟೈರ್ ನಾಳೆ ಅಥವಾ ನಾಡಿದ್ದು ಬರುವ ನಿರೀಕ್ಷೆ ಇದೆ. ಬಂದ ನಂತರ ಆ್ಯಂಬುಲೆನ್ಸ್ ಸೇವೆ ನಿರಂತರವಾಗಿ ಸಾಗಲಿದೆ.
ವಿನಯಕುಮಾರ್,
ಮೇಲ್ವಿಚಾರಣ ಅಧಿಕಾರಿ, ಜಿವಿಕೆ ಕಂಪನಿ, ಬಳ್ಳಾರಿ
ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಕೆಟ್ಟು ನಿಂತು ನಾಲ್ಕು ತಿಂಗಳು ಕಳೆದಿದೆ. ಆದರೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಆಂಬ್ಯುಲೆನ್ಸ್ ಕೆಟ್ಟು ನಿಂತಿರುವುದರಿಂದ ರಾತ್ರಿ ವೇಳೆ ರೋಗಿಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆ ತರುವುದು ಮತ್ತು ಜಿಲ್ಲಾಸ್ಪತ್ರೆಗೆ ರವಾನಿಸುವುದು ದುಸ್ತರವಾಗಿದೆ. ತಕ್ಷಣವೇ ಆಂಬ್ಯುಲೆನ್ಸ್ ರಿಪೇರಿ ಮಾಡಿ ಸೇವೆಗೆ ನೀಡಬೇಕು.
ಹಾಲೇಶ್,
ಗ್ರಾಮಸ್ಥ