ಹರಪನಹಳ್ಳಿ: ತುಂಗಭದ್ರಾ ನದಿಯಿಂದ ತಾಲೂಕಿನ 50 ಕೆರೆಗಳಿಗೆ ನೀರು ತುಂಬಿಸುವ 227 ಕೋಟಿರೂ ವೆಚ್ಚದ ಕಾಮಗಾರಿ ಕೋವಿಡ್ ಕಂಟಕದಿಂದ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಭಾಗದ ರೈತರಿಗೆ ಮುಂಗಾರು ಹಂಗಾಮು ಕೃಷಿ ಚಟುವಟಿಕೆಗೆ ತೀವ್ರ ತೊಂದರೆ ಉಂಟಾಗಿದೆ.
ಕಳೆದ ವಾರ ವಿವಿಧೆಡೆ ಹಸಿ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಲು ರಂಟೆ, ಕುಂಟೆ ಹೊಡೆದು ಜಮೀನುಗಳನ್ನು ರೈತರು ಹಸನ ಮಾಡಿಕೊಳ್ಳಬೇಕಿದೆ. ಆದರೆ ಕಾಮಗಾರಿ ಗುತ್ತಿಗೆ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿ ಅವರು ಕಾಮಗಾರಿ ಪ್ರಾಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವಾರದ ಹಿಂದೆಯೇ ಕಾಮಗಾರಿಗಳನ್ನು ನಡೆಸಲು ಜಿಲ್ಲಾಧಿಕಾರಿಗಳು ಅವಕಾಶ ಕಲ್ಪಿಸಿದ್ದರೂ ಗುತ್ತಿಗೆದಾರರು ತಿರುಗಿಯೂ ನೋಡಿಲ್ಲ. ಕೊರೊನಾ ಲಾಕ್‌ಡೌನ್ ಶುರುವಾಗುವ ಹಿಂದಿನ ದಿನಗಳಲ್ಲಿ ಪೈಪ್‌ಲೈನ್ ಅಳವಡಿಸಲು ರೈತರ ಹೊಲಗಳಲ್ಲಿ ಕಾಲುವೆ ತೆಗೆದು ಎಲ್ಲೆಂದರಲ್ಲಿ ಪೈಪ್‌ಗ್ಳನ್ನು ಹಾಕಿದ್ದಾರೆ.
ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿರುವುದರಿಂದ ತಾಲೂಕಿನ ವಿವಿಧ ಭಾಗದಲ್ಲಿ ಸುಮಾರು ನೂರಾರು ರೈತರಿಗೆ ತೀವ್ರ ತೊಂದರೆ ಆಗಿದೆ. ಹಂಪಾಪುರ ಗ್ರಾಮದಿಂದ ಗೌರಿಹಳ್ಳಿ, ತೋಗರಿಕಟ್ಟೆ, ಉದ್ದಗಟ್ಟಿ, ಹುಲಿಕಟ್ಟಿ, ಬಾಪೂಜಿ ನಗರ, ಉದ್ದಗಟ್ಟಿ ಸಣ್ಣ ತಾಂಡ, ಕನ್ನನಾಯಕನಹಳ್ಳಿ ಭಾಗದ ರೈತರ ಹೊಲದಲ್ಲಿ ಪೈಪ್‌ಗ್ಳನ್ನು ಎಲ್ಲೆಂದರಲ್ಲಿ ಹಾಕಿರುವುದರಿಂದ ಭೂಮಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಪ್ರಿಲ್ ತಿಂಗಳಲ್ಲಿ ಭೂಮಿ ಸಿದ್ಧತೆ ಮಾಡಿಕೊಂಡ ರೈತರು ಪ್ರತಿ ವರ್ಷ ಮೇ 15ರ ನಂತರ ಬಿತ್ತನೆ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಸದ್ಯ ಭೂಮಿ ಸಿದ್ಧತೆ ಅಗತ್ಯವಿರುವಷ್ಟು ಮಳೆ ಮಳೆ ಬಂದಿರುವುರಿಂದ ರೈತರು ಚಡಪಡಿಸುವಂತಾಗಿದೆ. ಕೇವಲ ಒಂದೆರಡು ಎಕರೆ ಜಮೀನು ಹೊಂದಿರುವ ರೈತರು ಈ ಸಮಯದಲ್ಲಿ ಭೂಮಿ ಸಿದ್ಧತೆ ಮಾಡಿಕೊಂಡು ಸರಿಯಾದ ಸಮಯದಲ್ಲಿ ಬಿತ್ತನೆ ಮಾಡದಿದ್ದಲ್ಲಿ ಇಡೀ ವರ್ಷ ಏನು ಬೆಳೆಯಲಾರದಂಥ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಮೇ ತಿಂಗಳ ಮೊದಲ ವಾರದಿಂದ ಊಟದ ಜೋಳ, ಎಳ್ಳು, ಹೆಸರು ನಂತರ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದೇವು, ಆದರೆ ನೀರು ತುಂಬಿಸುವ ಕಾಮಗಾರಿಯಿಂದ ಸ್ಥಗಿತಗೊಂಡಿರುವುದರಿಂದ ಕೋವಿಡ್ ನಂತರ ನಮಗೆ ಗುತ್ತಿಗೆದಾರರಿಂದ ಸಮಸ್ಯೆ ಉಂಟಾಗಿದೆ. ಕೆಲಸ ಪ್ರಾರಂಭಿಸದಿದ್ದಲ್ಲಿ ನಮಗೆ ಪರಿಹಾರ ಕೊಡಬೇಕು, ಇಲ್ಲವೇ ಕೂಡಲೇ ಕಾಮಗಾರಿ ಮುಗಿಸಬೇಕು ಎನ್ನುವುದು ಹುಲಿಕಟ್ಟಿ ಗ್ರಾಮದ ರೈತರಾದ ಬಣಕಾರ ಗಂಗಾಧರಪ್ಪ, ಅಂಗಡಿ ಮಹಬೂಬ್‌ಸಾಬ್, ಮದರಲಿಸಾಬ್, ನಂದ್ಯಾಲ ಕೋಟ್ರಪ್ಪ, ಕೆ.ಹಾಲೇಶ್ ಇತರರ ಒತ್ತಾಯವಾಗಿದೆ. ರೈತರು ತಮ್ಮದಲ್ಲದ ತಪ್ಪಿನಿಂದ ಸಂಕಷ್ಟ ಎದುರಿಸಬೇಕಾಗಿದೆ. ತಕ್ಷಣವೇ ಕಾಮಗಾರಿ ಪ್ರಾರಂಭಿಸಿ ಮುಗಿಸುವುದರ ಜೊತೆಗೆ ರೈತರಿಗೆ ಅನಾನುಕೂಲ ಮಾಡಿರುವ ಗುತ್ತಿಗೆದಾರರೇ ರೈತರ ಜಮೀನುಗಳನ್ನು ಹಸನ ಮಾಡಿಕೊಡುವ ಮೂಲಕ ಸಕಾಲದಲ್ಲಿ ಬಿತ್ತನೆಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ತಾಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಆಗ್ರಹಿಸಿದ್ದಾರೆ.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪೈಪ್‌ಲೈನ್ ಅಳವಡಿಕೆಯ ಕಾಮಗಾರಿ ತಾಲೂಕಿನ 11 ಕಡೆ ಕೆಲಸ ನಡೆಯುತ್ತಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಕೊರೊನಾ ಬಾರದಿದ್ದರೆ ಈಗಾಗಲೇ ಕೆಲಸ ಮುಗಿಯುತ್ತಿತ್ತು. ಕೂಡಲೇ ಕಾಮಗಾರಿ ಆರಂಭಿಸಿ ರೈತರಿಗೆ ಭೂಮಿ ಹಸನ ಮಾಡಲು ಮತ್ತು ಬಿತ್ತನೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು.
ಎನ್.ಜಿ. ಗಂಗಪ್ಪ, ಎಇಇ,
ಕರ್ನಾಟಕ ನೀರಾವರಿ ನಿಗಮ
ಎಸ್.ಎನ್.ಕುಮಾರ್ ಪುಣಬಗಟ್ಟಿ